ಯಾರವರು ?!

ತವರೂರನ್ನು ಬಿಟ್ಟು , ಕಾರಣಾಂತರಗಳಿಂದ ಇರಬೇಕಾಗಿರುವ ಊರಿಗೆ ಹೊರಡುವ ಸಮಯದಲ್ಲಿ ಎಂದೂ ಬಯಸಿರದ ಆಸೆಗಳು ಒಂದೊಂದಾಗಿ ಹುಟ್ಟುತ್ತವೆ. ನೀವು ಕಣ್ಣೆತ್ತಿಯೂ ನೋಡಿರದ ಪುಟ್ಟ ಹೊಟೇಲಿನಲ್ಲಿ ನಿಂತು ಚಹಾ ಕುಡಿಯಬೇಕೆಂದು ಅನಿಸುತ್ತದೆ. ಒಂದು ಬಾರಿಯೂ ಓಡಾಡಿರದ ಬೀದಿಯಲ್ಲಿ ಅಲೆದಾಡುವ ಬಯಕೆ ಮೂಡುತ್ತದೆ. ವೇಗವಾಗಿ ವಾಹನದಲ್ಲಿ ಓಡಾಡಿದ ಊರಿನಲ್ಲಿ , ನಡೆದುಕೊಂಡು ಹೋಗಬೇಕು ಎಂದನಿಸುತ್ತದೆ . ಎಲ್ಲಕ್ಕಿಂತ ಮಿಗಿಲಾಗಿ , ಎದುರಾಗುವ ಅನಾಮಿಕನೂ ಸಂಬಂಧಿಕನಂತೆ ಕಾಣುತ್ತಾನೆ . ಈ ತಾತ್ಕಾಲಿಕ ಸಂಬಂಧಿಕರ ಲೋಕದ ಮುಖ್ಯ ಪಾತ್ರಧಾರಿಗಳೆಂದರೆ , ನಾವು ಪ್ರಯಾಣಿಸಲಿರುವ ಬಸ್ಸಿನ ( ಅಥವಾ ಇನ್ಯಾವುದೋ ವಾಹನದ) ಚಾಲಕ ಹಾಗು ಕಂಡಕ್ಟರ್ . ಎಂದೂ ನೋಡಿರದ ಮುಖಗಳು ನಮ್ಮನ್ನು ಸ್ವಾಗತಿಸಿ , ದೂರದ ಊರಿಗೆ ಕರೆದುಕೊಂಡು ಹೋಗುವ ವಿಪರ್ಯಾಸ. ದುಖ ತುಂಬಿದ ಮನಸ್ಸಿಗೆ ಸಾಂತ್ವಾನ ಹೇಳಿ , ಇದುವೇ ಬದುಕಿನ ಕರಾಳ ಸತ್ಯ , ಬೆಳಗಾಗುವುದರೊಳಗೆ ಚೇತರಿಸಿಕೊ ಎಂದು ಕಣ್ಣಿನಲ್ಲೇ ಹೇಳಿಬಿಡುವ ಹಿತೈಷಿಗಳು.ಊರು ತಲುಪಿ ಬಸ್ಸಿನಿಂದ ಇಳಿಯುವ ಮುನ್ನ ಒಂದು ಬಾರಿ ಅವರ ಮುಖಗಳನ್ನು ನೋಡಿದಾಗ ಮೂಡುವ ಕೃತಜ್ಞತೆಯನ್ನು ನಮ್ಮಲ್ಲೇ ಇಟ್ಟುಕೊಂಡು ತೆರಳುವ ಸ್ವಾಭಿಮಾನಿಗಳಾದ ನಾವು , ಉತ್ತರಿಸಬೇಕಾದ ಪ್ರಶ್ನೆಯೊಂದಿದೆ . ಪಯಣದುದ್ದಕ್ಕೂ ಯಾವುದರ ಅರಿವೂ ಇಲ್ಲದೆ ನಿದ್ರಿಸುವ ನಾವು ಪಯಣಿಗರಾದರೆ , ನಿದ್ರೆ ಮರೆತು ನಮ್ಮನ್ನು ಊರಿಗೆ ತಲುಪಿಸುವ ಅವರು ಯಾರು? ಪಯಣಿಗರೊ ?! ಸಂಬಂಧಿಕರೊ?!

ಪರಿಚಯ

ಬದುಕಿನ ಅನುಭವಗಳನ್ನು ಹಂಚಿಕೊಳ್ಳುವ ಜೊತೆಗೆ , ಮೂಡುವ ಅನೇಕ ಪ್ರಶ್ನೆಗಳಿಗೆ ಲೇಖನಗಳ ಮೂಲಕ ಉತ್ತರ ಹುಡುಕಲು ಬಯಸುವ ಲೇಖಕ ನಾನು . ಕಾಲ್ಪನಿಕ ಜಗತ್ತಿಗಿಂತ , ದಿನನಿತ್ಯ ಕಾಣಸಿಗುವ ಸಣ್ಣದಾದರೂ ಬಹಳ ಅರ್ಥಪೂರ್ಣ ದೃಶ್ಯಗಳ ಮೇಲೆ ಆಸಕ್ತಿ ಜಾಸ್ತಿ.

ಭಾವುಕತೆ ಬೇಕೆ?

ಎಲ್ಲವೂ ವೇಗವಾಗಿ , ನಮ್ಮ ಹತೋಟಿ ತಪ್ಪಿ ಸಾಗುತ್ತಿರುವ ಕಾಲದಲ್ಲಿ , ಅದರ ಪರಿವೇ ಇಲ್ಲದಂತೆ ಸದಾ ಭಾವುಕನಾಗಿ ಇರುವ ವ್ಯಕ್ತಿಯನ್ನು ಭೇಟಿಯಾದಾಗ ಆಗುವ ಅನುಭವ ಬಹಳ ವಿಶೇಷವಾದದ್ದು. ಮರೆತು ಹೋಗಿರುವ ಮಾನವೀಯತೆ ಅಲ್ಲಿ ಅಲೆದಾಡುತ್ತಾ , ನಿಮ್ಮನ್ನು ನೋಡಿದಾಗ ನಗೆ ಬೀರಬಹುದು . ನೀವು ಎಂದೂ ಯೋಚಿಸಿರದ ಆಯಾಮವೊಂದು ನಿಮಗಾಗಿ ಕಾದು ಕುಳಿತಿರಬಹುದು . ಹೆಚ್ಚಿನ ಲೆಕ್ಕಾಚಾರಗಳ ತವರಾಗಿರದ ಆ ಮನಸ್ಸು , ನಿಮ್ಮ ಕಣ್ಣುಗಳಲ್ಲಿ ಕಾಣುತ್ತಿರುವ ನೂರಾರು ಆಲೋಚನೆಗಳನ್ನು ಬೆರಗಾಗಿ ನೋಡುತ್ತಿರುವ ದೃಶ್ಯವನ್ನೊಮ್ಮೆ ಕಲ್ಪಿಸಿಕೊಳ್ಳಿ . ಈಗಾಗಲೆ ಬಹಳ ದೂರ ಸಾಗಿರುವ ನೀವು , ರಾತ್ರಿಯ ವೇಳೆಯಲ್ಲಿ ಹಿಂದಿರುಗಿ ನೋಡಿದಾಗ ಬೆಳಕು ಕಂಡರೆ , ಮತ್ತೆ ಹಿಂದಿರುಗಿ ಹೋಗುತ್ತೀರೋ ಅಥವಾ ಅದರ ನೆನಪುಗಳನ್ನು ದಾರಿದೀಪವಾಗಿಸಿಕೊಂಡು ಮುನ್ನಡೆಯುತ್ತೀರೋ …? ನೀವೆ ನಿರ್ಧರಿಸಿ.