ಜಾಲಹಳ್ಳಿ ಕ್ರಾಸ್!

ತುಂಬಾ ಸಮಯದ ನಂತರ ಮನೆಗೆ ತೆರಳಿ , ಮನಸಾರೆ ಆನಂದಿಸಿ ಒಂದೆರಡು ದಿನಗಳನ್ನು ಕಳೆದು , ಮತ್ತೆ ಕೆಲಸದ ಕಾರಣದಿಂದ ನೆಲೆಸಿರುವ ಬೆಂಗಳೂರಿನೆಡೆಗೆ ತೆರಳುವ ಬಸ್ ಹತ್ತಬೇಕು. ಇದೊಂದು ಅನಿವಾರ್ಯ ಕಾರ್ಯ ಎಂದು ಒಪ್ಪಿಕೊಳ್ಳಲು ಹಲವು ತಿಂಗಳುಗಳೇ ಬೇಕಾಗಿತ್ತು ನನಗೆ. ಆ ಬಸ್ ಹತ್ತುವಾಗ , ಈ ಬೆಂಗಳೂರಿನಲ್ಲಿ ಬಿಟ್ಟು ಹೋದ ಎಲ್ಲಾ ತೊಂದರೆಗಳು ಅಂದಿನ ರಾತ್ರಿ ನಾನು ಮಲಗಲಿರುವ ಬೆಡ್ ನ ಮೇಲೆ ಕುಳಿತುಕೊಂಡು , ನನ್ನನ್ನೇ ಕಾಯುತ್ತಿರುವ ಹಾಗೆ ಭಾಸವಾದದ್ದೂ ಇದೆ. ಅಂದಿನ ರಾತ್ರಿಯ ನಿದ್ರೆಯೂ ಬಹಳ ವಿಶೇಷವಾದದ್ದು. ಒಳ್ಳೆಯ ನಿದ್ರೆ ಹತ್ತುತ್ತಿದೆಯಲ್ಲಾ ಎಂದು ಖಷಿಪಡುವಷ್ಟರಲ್ಲಿ , ಐದು ನಿಮಿಷ ಸಮಯವಿದೆ .. ಬೇರೆಲ್ಲೂ ನಿಲ್ಲಿಸುವುದಿಲ್ಲ ಎಂಬ ಸೂಚನೆ. ಎಂಥಾ ನಿದ್ರೆಯಲ್ಲಿದ್ದರೂ ನಿಮ್ಮನ್ನು ಎಚ್ಚರಿಸಿ ಬಿಡುವ ಘೋಷಣೆ ಅದು. ಅಲ್ಲೊಮ್ಮೆ ಎದ್ದ ನಂತರ ಇನ್ನೂ ಚೆನ್ನಾಗಿ ನಿದ್ರೆ ಹತ್ತಿದರೂ ಮೈಮರೆತು ಮಲಗುವಂತಿಲ್ಲ. ಏಕೆಂದರೆ , ನಾವು ಇಳಿಯ ಬೇಕಿರುವ ಸ್ಟಾಪ್ ಇನ್ನೇನು ಕೆಲವು ತಾಸಿನಲ್ಲಿ ಬರಲಿದೆ. ಕೊನೆಯ ಸ್ಟಾಪ್ ನಲ್ಲಿ ಇಳಿದು ಅಪರಿಚತರ ನಡುವೆ ಬೆಳ್ಳಂಬೆಳಿಗ್ಗೆ ವ್ಯವಹರಿಸಿ ನಮ್ಮ ಏರಿಯಾಗೆ ಹಿಂದಿರುಗಿ ಬರುವ ಸಾಹಸ ಮಾಡುವಷ್ಟು ಸಮಯವಿರುವುದಿಲ್ಲ. ಇದುವೇ ಬೆಂಗಳೂರಿನ ವಿಶೇಷ. ಅದೆಷ್ಟೇ ಸುತ್ತಾಡಿದರೂ , ನೀವು ಕಾಲಿಡದ , ನೋಡಿರದ ಬೇಕಾದಷ್ಟು ಸ್ಥಳಗಳು ಉಳಿದಿರುತ್ತವೆ. ಅಲ್ಲಿಗೆ ತೆರಳಿದಾಗ , ಅದು ನೀವು ಹಲವಾರು ವರ್ಷಗಳಿಂದ ನೆಲೆಸಿರುವ ಬೆಂಗಳೂರೇ ಆದರೂ , ನಿಮಗೆ ಅದು ಅಪರಿಚಿತ ಎಂದು ಅರಗಿಸಿಕೊಳ್ಳಲೇಬೇಕು.

ಸ್ಟಾಪ್ ಹತ್ತಿರವಾದಂತೆ ಹೆಚ್ಚುವ ನಿದ್ರೆ ಒಂದೆಡೆಯಾದರೆ , ಬಿಟ್ಟು ಬಂದಿರುವ ಊರಿನ ಹಾಗು ಮನೆಯ ನೆನಪು ಬೆರೆತು ಇನ್ನಷ್ಟು ಕಾಡಲಾರಂಭಿಸುತ್ತವೆ. ಹಾಗೋ ಹೀಗೋ ಸುಧಾರಿಸಿಕೊಂಡು ಮಲಗಿರಬೇಕಾದರೆ , ಯಾರೋ ತಣ್ಣೀರನ್ನು ನೇರವಾಗಿ ಮುಖಕ್ಕೆ ಎರಚಿದ ಅನುಭವವಾಗುತ್ತದೆ. ಅದುವೇ , ಬಸ್ ಕಂಡಕ್ಟರ್ ಆರಿದ್ದ ಲೈಟ್ಸ್ ಗಳನ್ನು ಹೊತ್ತಿಸಿ , ತನ್ನ ಸಾಮ್ರಾಜ್ಯವನ್ನು ನಮ್ಮಿಂದ ಬೇರ್ಪಡಿಸುವ ಬಾಗಿಲನ್ನು ತೆಗೆದು , ಮೊದಲ ಬಾರಿಗೆ ಕಿರುಚುವ ಸಮಯ. ನನ್ನ ಒದ್ದಾಟವನ್ನು ಇನ್ನಷ್ಟು ಹೆಚ್ಚಿಸಿ ಕಾಡುವ , ಆತ ಕಿರುಚುವ ಪದವೇ ” ಜಾಲಹಳ್ಳಿ ಕ್ರಾಸ್!!!!” . ಆ ಧ್ವನಿಯಲ್ಲಿ ಅದೆಂತಹ ಉತ್ಸಾಹವಿರುತ್ತದೆ ಎಂದರೆ , ಅನೇಕ ಹೋರಾಟಗಳನ್ನು ನಡೆಸಿ , ಅದೆಷ್ಟೋ ದಿನಗಳ ನಂತರ ಒಂದು ಸ್ವರ್ಗಕ್ಕೆ ತಲುಪಿದಂತಹ ಉತ್ಸಾಹ. ನನ್ನ ಎಲ್ಲಾ ಆನಂದವನ್ನು ದೂರವಾಗಿಸಿ , ಅಲ್ಲಿಯವರೆಗೆ ಜೊತೆಗಿದ್ದ ನನ್ನ ಊರಿನ ನೆನಪುಗಳಿಗೆ , ನೀನ್ನಿನ್ನು ಹೊರಡಬಹುದು ಎಂದು ಹೊರದಬ್ಬುವ ರೀತಿಯಲ್ಲಿ ನನಗೆ ಆ ಪದ ಕೇಳುತ್ತದೆ. ಎಲ್ಲಾ ಭಾವನೆಗಳನ್ನು ಮರೆತು , ವಾಸ್ತವವನ್ನು ಸ್ವೀಕರಿಸು ಎಂದು ಕಟುವಾಗಿ ಯಾರೋ ಹೇಳಿದಂತಹ ಅನುಭವ. ಒಟ್ಟಿನಲ್ಲಿ , ನಾನು ಎಂದೂ ಕಣ್ತೆರೆದು ನೋಡದ , ಆದರೂ ಜೀವಮಾನದಲ್ಲಿ ಮರೆಯದ , ಒಂದು ವಿಶೇಷ ಸ್ಥಳವಾಗಿ ಜಾಲಹಳ್ಳಿ ಕ್ರಾಸ್ ಉಳಿಯಲಿದೆ ಎಂಬುದರಲ್ಲಿ ಅನುಮಾನವಿಲ್ಲ.

ಬಣ್ಣದ ಹಿಂದೆ …

ಬದುಕಿನ ಅದೆಷ್ಟೋ ತಕರಾರುಗಳಿಂದ ದೂರಸರಿದು ಒಂದು ಒಳ್ಳೆಯ ನಾಟಕ ನೋಡಬೇಕು , ಆ ನಾಟಕದಿಂದ ಹೊಸ ಸ್ಪೂರ್ತಿಯೊಂದು ದೊರೆಯಬಹುದು ಎಂದು ಕೆಲವೊಮ್ಮೆ ನಾವು ಲೆಕ್ಕಾಚಾರ ಹಾಕುವುದಿದೆ. ನಾಟಕ ನೋಡುವವರೇ ಇಲ್ಲದ ಈ ಕಾಲದಲ್ಲಿ , ಆ ಆಲೋಚನೆಯನ್ನು ಮಾಡುವುದೇ ಒಂದು ರೀತಿಯ ಸಾಧನೆ. ನಾವು ಹೇಗೆ ಒಂದು ನಿಟ್ಟುಸಿರನ್ನು ಅರಸಿ ಕುಳಿತುಕೊಂಡು ನಾಟಕ ನೋಡುತ್ತೇವೋ , ಅಲ್ಲಿ ಬಣ್ಣ ಹಚ್ಚಿಕೊಂಡು ನಟಿಸುವಾತನೂ ನಮ್ಮಂತೆಯೇ ಯಾವುದೋ ಒಂದು ಸುಳಿಗೆ ಸಿಲುಕಿ ಒದ್ದಾಡುತ್ತಿರುತ್ತಾನೆ ಎಂಬ ವಿಚಾರವನ್ನು ಮರೆತು ಬಿಟ್ಟಿರುತ್ತೇವೆ. ಅನೇಕ ಬಾರಿ , ಅಲ್ಲಿ ಕಾಣುವ ಪಾತ್ರಗಳನ್ನು ನೋಡಿ , ನಮ್ಮ ಬದುಕೂ ಹಾಗಿರುತ್ತಿದ್ದರೆ ಅದೆಷ್ಟು ಆರಾಮವಾಗಿರಬಹುದಿತ್ತು ಎಂದು ಆಲೋಚಿಸುತ್ತೇವೆ . ಗುಡಿಸಿಲಿನಲ್ಲಿ ವಾಸಿಸುವ ಜೀವವೊಂದು ಅಲ್ಲಿ ಶ್ರೀಮಂತನಾಗಿ ನಟಿಸಬೇಕು , ಕಣ್ಣೀರಿನಿಂದಲೇ ದಿನ ಕಳೆಯುವ ಚೇತನ .. ಅಲ್ಲಿ ನೆರೆದವರನ್ನು ನಗಿಸಿ ಮನರಂಜಿಸಬೇಕು , ಮದುವೆಯಾಗದೆ ಒದ್ದಾಡುತ್ತಿರುವ ಹೆಣ್ಣುಮಗಳೊಬ್ಬಳು ಅಲ್ಲಿ ಗಂಡನೊಂದಿಗೆ ಅನ್ಯೋನ್ಯವಾಗಿ ನಟಿಸಬೇಕು , ಸಾಲಗಾರರ ಕರೆಯನ್ನು ಮರೆಯಲ್ಲಿ ನಿಂತು ಉತ್ತರಿಸಿ ..ತನ್ನ ಪಾತ್ರದ ಸಮಯ ಬಂದಾಗ ಕಲಾವಿದನೋರ್ವ ಸಾಹುಕಾರನಾಗಬೇಕು. ಸಿನಿಮಾದಲ್ಲಾದರೆ , ನಟಿಸುವಾಗ ತಪ್ಪಾದರೆ ಇನ್ನೊಂದು ಅವಕಾಶವಿರುತ್ತದೆ. ಆದರೆ ಇಲ್ಲಿ ಒಂದು ಕ್ಷಣ ಮೈ ಮರೆತರೂ ಅಂದಿನ ವೇತನ ಸಿಗದಿರಬಹುದು. ಕಾಲಿನ ಮೇಲೆ ಕಾಲು ಹಾಕಿಕೊಂಡು ಪ್ರೇಕ್ಷಕನ ಸಿಂಹಾಸನದ ಮೇಲೆ ಕುಳಿತುಕೊಂಡು ಅಭಿಪ್ರಾಯ ತಿಳಿಸುವ ನಾವೊಮ್ಮೆ , ಅವರ ಬಣ್ಣವಿಲ್ಲದ ಮುಖವನ್ನು ನೋಡಿದರೆ ?! ಆ ಕ್ಷಣವನ್ನು ಎದುರಿಸುವ ಸಾಮರ್ಥ್ಯ ನಮಗಿರುವುದೇ ?

ಕುಮಾರಪರ್ವತ – ಭಾಗ – ೩

ನನ್ನ ರೂಮ್ ಮೇಟ್ ಹಾಗು ಟ್ರೆಕ್ ಲೀಡ್ ಸ್ವಲ್ಪ ಹಿಂದೆಯ ತನಕ ಹೋಗಿ ನೋಡಿಕೊಂಡು ಬಂದರು. ಕಾಲು ನೋವಾಗುತ್ತಿದ್ದ ಕಾರಣ ಆತ ಅಲ್ಲೇ ಹಿಂದೆಲ್ಲೋ ಕುಳಿತು ಬಿಟ್ಟಿದ್ದ . ಆತನನ್ನು ವಿಶ್ರಾಂತಿ ಪಡೆದುಕೊಳ್ಳಲಿ ಎಂದು ನೀರು ಹರಿಯುತ್ತಿದ್ದ ಜಾಗದ ಬಳಿ ಬಿಟ್ಟು , ನಾವು ಮುನ್ನಡೆದೆವು. ಸುಮಾರು ಇಪ್ಪತ್ತು ನಿಮಿಷಗಳ ನಂತರ ಕೊನೆಗೂ ಕಲ್ಲು ಮಂಟಪ ತಲುಪಿದೆವು. ಟ್ರೆಕ್ ಆರಂಭಿಸುವಾಗ ತೆಗೆದುಕೊಂಡಿದ್ದ ಪುಲಾವ್ ಸೇವಿಸಲು ಇದುವೇ ಸೂಕ್ತ ಸಮಯ ಎಂದು ನಿರ್ಧರಿಸಿದೆವು. ಒಟ್ಟಿನಲ್ಲಿ ಅದೆಷ್ಟೋ ಸಾಹಸಿಗಳು ಬೆಟ್ಟವನ್ನು ಹತ್ತುತ್ತಿರುವಾಗ , ಕಲ್ಲು ಮಂಟಪದಲ್ಲಿ ಕುಳಿತು ಪುಲಾವ್ ಸೇವಿಸಿದ ಮಾನವರು ನಾವು. ನಾನು ಒಂದು ನಿರ್ಧಾರವನ್ನು ಕೈಗೊಳ್ಳಬೇಕಿತ್ತು. ತಲೆನೋವು ಅದಾಗಲೇ ಪ್ರಾರಂಭವಾಗಿತ್ತು. ನಿಲ್ಲದ ಬಾಯಾರಿಕೆ. ಯಾವ ಕ್ಷಣದಲ್ಲಿ ಬೇಕಾದರೂ ಕುಸಿಯಬಹುದಾದ ಕಾಲುಗಳು. ಇಷ್ಟೆಲ್ಲಾ ನಡೆಯುತ್ತಿರಬೇಕಾದರೆ , ಇನ್ನೂ ಶೇಷಪರ್ವತ ಬಂದಿಲ್ಲ. ಕುಮಾರಪರ್ವತ ತನಕ ಹೋಗಬೇಕೆ ಅಥವಾ ಶೇಷಪರ್ವತ ತನಕ ಹೋಗಿ ಹಿಂದಿರುಗಬೇಕೆ ಎಂದು ನಿರ್ಧರಿಸಬೇಕು. ನನ್ನ ರೂಮ್ ಮೇಟ್ ಹಾಗು ಟ್ರೆಕ್ ಲೀಡ್ ಖಂಡಿತವಾಗಿಯೂ ಕೊನೆಯ ತನಕ ತೆರಳಲಿದ್ದಾರೆ ಎಂಬುದು ತಿಳಿದಿತ್ತು. ಈ ಗೊಂದಲದ ನಡುವೆಯೇ ಮತ್ತೆ ಪಯಣ ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲಿ , ಹಲವು ತಿಂಗಳ ಹಿಂದೆ ಕಾಡಿದ್ದ ಹಲ್ಲು ನೋವು , ತುಂಬಾ ಒಳ್ಳೆಯ ಸಮಯ ನೋಡಿ ಮತ್ತೆ ಭೇಟಿಯಾಗಲು ಬಂದು ಬಿಟ್ಟಿತು. ಅವರಿಬ್ಬರು ನಿಲ್ಲದೆ ಮುಂದೆ ಸಾಗುತ್ತಿದ್ದರು. ಕುಳಿತುಕೊಂಡು ಬಿಡಲೇ ಎಂದು ಒಮ್ಮೆ ಯೋಚಿಸಿದೆ. ಹಿಂದಿರುಗಿ ನೋಡಿದೆ. ಅದೆಷ್ಟೋ ಬೆಟ್ಟಗಳು ನನ್ನ ಕೆಳಗಿದ್ದವು. ಹಸಿರು ಹೊದಿಕೆಯಲ್ಲಿ ಕಂಗೊಳಿಸುತ್ತಿರುವ ಬೆಟ್ಟಗಳು. ಇನ್ನೂ ಎತ್ತರಕ್ಕೆ ಹೋದರೆ ಅದೆಷ್ಟು ಅಂದವಾಗಿ ಕಾಣಬಹುದು ?! ಹೋಗಲೇ ಬೇಕು ಅಲ್ಲಿಗೆ ಎಂದು ಆಲೋಚಿಸಿ ನಡೆದೆ. ನಮ್ಮನ್ನು ಹೌಹಾರಿಸುವಂತಹ ದೃಶ್ಯ ಎದುರಾಯಿತು. ಆ ನೀರಿನ ಜಾಗದ ಬಳಿ ಕುಳಿತ್ತಿದ್ದ ಗೆಳೆಯ , ಇಲ್ಲಿ ನಾವು ಬರುತ್ತಿರುವುದನ್ನು ಎತ್ತರದಲ್ಲಿ ಕುಳಿತು ನೋಡುತ್ತಿದ್ದ !!!

ಆತ ಕಲ್ಲು ಮಂಟಪದಲ್ಲಿ ವಿಶ್ರಾಂತಿಯೇ ಪಡೆದಿರಲಿಲ್ಲ. ಗಟ್ಟಿಯಾಗಿ ಧೈರ್ಯ ಮಾಡಿ ನೇರವಾಗಿ ನಡೆಯುತ್ತಾ ಅಲ್ಲಿಯವರೆಗೆ ತಲುಪಿದ್ದ! ಆದರೆ ಆತನ ಸ್ಥಿತಿ ಇನ್ನೂ ಹಾಗೆಯೇ ಇತ್ತು. ಊಟ ಮಾಡಲು ಅಲ್ಲೇ ಕುಳಿತ. ಆತ ಕೊನೆಯವರೆಗೆ ಬರಲಾರ ಎಂಬುದು ಅಲ್ಲೇ ಖಾತ್ರಿಯಾಗಿತ್ತು. ಮತ್ತೇ ಹಸಿವು ಪ್ರಾರಂಭವಾಗಿತ್ತು. ನಮ್ಮ ಬಳಿ ಇದ್ದದ್ದು ಹಲವು ಚಾಕಲೇಟ್ ಗಳು ಮಾತ್ರ. ಅವುಗಳನ್ನು ತಿಂದರೆ ಬಾಯಾರಿಕೆ ಹೆಚ್ಚಾಗುತ್ತದೆ. ಬಾಟಲಿಯ ನೀರು ಇನ್ನೇನು ಮುಗಿಯಲಿದೆ. ಪ್ರಚಂಡವಾದ ಬಿಸಿಲು ಆವರಿಸಿರುವ ಬೆಟ್ಟದ ಮೇಲೆ ಮತ್ತೆ ನೀರು ಸಿಗುವ ಸಾಧ್ಯತೆಯೇ ಇಲ್ಲ. ಜೋರಾಗಿ ಗಾಳಿ ಬೀಸಿದರೂ ದೂರವಾಗದ ದಣಿವು. ಇಂತಹ ಸಂದರ್ಭದಲ್ಲಿ , ಒಬ್ಬರು ಬಂದು ಕಿತ್ತಳೆ ಹಣ್ಣು ನೀಡಿದರು. ಅವರು ಯಾರೆಂದು ನನಗೆ ಗೊತ್ತಿಲ್ಲ. ನನಗೆ ಪರಿಚಯವೇ ಇಲ್ಲದ , ಸಂಬಂಧವೇ ಇರದ ವ್ಯಕ್ತಿ. ಬಯಸಿದ್ದರೆ ಹಾಯಾಗಿ ತನ್ನ ಪಾಡಿಗೆ ತಿಂದುಕೊಂಡು ಅವರು ತೆರಳಬಹುದಿತ್ತು. ತುಂಬಾ ಎತ್ತರದ ಬೆಟ್ಟವೊಂದರ ಮೇಲೆ ಕಂಡ ಮಾನವೀಯತೆ ಅದು. ಇಡೀ ಮಾನವ ಸಂಬಂಧದ ಅಂದವನ್ನು ಬಿಚಿಟ್ಟಿತ್ತು ಈ ಕುಮಾರಪರ್ವತ ಟ್ರೆಕ್. ನೀವು ಬೆಟ್ಟ ಹತ್ತುವಾಗ ಜಾರಿದರೆ ಯಾರದ್ದೋ ಹೃದಯ ಮಿಡಿಯುತ್ತದೆ. ಯಾರೋ ಬಂದು ನೀರು ನೀಡುತ್ತಾರೆ. ಯಾರೋ ಹುರಿದುಂಬಿಸುತ್ತಾರೆ. ಯಾರೋ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ. ಯಾರೋ ಸ್ಪೂರ್ತಿಯಾಗುತ್ತಾರೆ. ಎಲ್ಲರೂ ಮಾನವರು ಎಂಬುದಷ್ಟೇ ಅಲ್ಲಿದ್ದ ಸೇತುವೆ.

ನಾನು ಈ ಟ್ರೆಕ್ ಪೂರ್ಣಗೊಳಿಸಲು ಆ ಒಂದು ಕಿತ್ತಳೆ ಹಣ್ಣು ಎಷ್ಟು ನೆರವಾಗಿತ್ತೋ , ಅಷ್ಟೇ ನೆರವು ಇನ್ನೊಂದು ಕಡೆಯಿಂದ ಬಂದಿತ್ತು. ಅದುವೇ , ನನ್ನ ಶರ್ಟ್ ಒಳಗೆ ತೆರಳಿ ಹೊಟ್ಟೆ ಭಾಗದಲ್ಲಿ ಬಲವಾಗಿ ಕಚ್ಚಿ ನಂತರ ತಪ್ಪಿಸಿಕೊಂಡು ಹಾರಿಹೋದ ಅಪರಿಚಿತ ನೊಣ. ಆ ಕುದಿಯುವ ಬಿಸಿಲಿನಲ್ಲಿ , ಆ ಗಾಯ ಇನ್ನಷ್ಟು ಹೆಚ್ಚಾಗಿ ಉರಿಯುತ್ತಿತ್ತು. ಅದೇ ಕಾರಣಕ್ಕೆ , ಅಲ್ಲಿಂದ ಮುಂದೆ ವಿಶ್ರಾಂತಿಗೆಂದು ಕುಳಿತಾಗ ಕಂಡ ಜೇನುನೊಣಗಳು ನನ್ನನ್ನು ವಿಶ್ರಾಂತಿ ಮುಗಿಸಿ ತಕ್ಷಣ ಹೊರಡಲು ಹುರಿದುಂಬಿಸಿದ್ದವು. ಹಾಗೋ ಹೀಗೋ ವೇಗವಾಗಿ ಬೆಟ್ಟ ಹತ್ತಬೇಕಿತ್ತು. ಏಕೆಂದರೆ ಒಂದು ವೇಳೆ ಹಾವುಗಳು ಎದುರಾಗುವುದಾದರೆ , ಅದು ಶೇಷಪರ್ವತದ ಸುತ್ತಮುತ್ತಲ್ಲಲ್ಲೇ ಎಂಬುದು ತಿಳಿದಿತ್ತು. ಕೊನೆಗೂ ಶೇಷಪರ್ವತ ತಲುಪಿದ್ದೆವು. ಅಲ್ಲಿಯ ತನಕ ತೆರಳಿ ಹಿಂದೆ ಬರಲು ಮನಸಾಗಲಿಲ್ಲ. ಅದೆಷ್ಟೇ ಕಷ್ಟವಾದರೂ , ಕುಮಾರಪರ್ವತ ಹತ್ತಲೇ ಬೇಕು ಎಂದು ನಿರ್ಧರಿಸಿ ಬಿಟ್ಟೆ. ಅಲ್ಲಿಗೆ ತಲುಪಲು , ಮೊದಲು ದಟ್ಟವಾದ ಒಂದು ಕಾಡು. ಮಳೆಗಾಲದಲ್ಲಿ ಲೀಚ್ ಗಳ ಸಾಮ್ರಾಜ್ಯವೇ ಇರುವ ಕಾಡು ಅದು. ಅದನ್ನು ದಾಟಿದ ನಂತರ ಎದುರಾದ್ದದ್ದು ಸುಮಾರು 60° ಯಲ್ಲಿದ್ದ ದೊಡ್ಡ ಬಂಡೆ. ಹತ್ತುವಾಗ ಒಂಚೂರು ಯಡವಿದರೂ ಸಾಕು. ಅರಿಯುವ ಮುನ್ನವೇ ಮತ್ತೇ ಕಾಡು ತಲುಪಿರುತ್ತೀರಿ. ಅದನ್ನು ಹತ್ತಿ ಮುನ್ನಡೆದ ಕೆಲವು ಕ್ಷಣಗಳ ನಂತರ ಕಂಡಿತು , ಕುಮಾರಪರ್ವತದ ಮೇಲೆ ರಾರಾಜಿಸುತ್ತಿದ್ದ ಕರ್ನಾಟಕದ ಧ್ವಜ !!

ಕೊನೆಗೂ ತಲುಪಿದ್ದೆವು !! ಎಲ್ಲಾ ದಣಿವು , ನೋವು ಮಾಯವಾಗಿತ್ತು. ಏನ್ನನ್ನೋ ಸಾಧಿಸಿದ ಹೆಮ್ಮೆ . ಅಲ್ಲಿಯವರೆಗೆ ತಲುಪಿದ್ದಕ್ಕೆ ಉಡುಗೊರೆಯಾಗಿ , ಮನತಣಿಸುವಂತಹ ಪ್ರಕೃತಿಯ ನೋಟ. ಸರಿಸುಮಾರು 36 ಜನರಿದ್ದ ನಮ್ಮ ಗುಂಪಿನಲ್ಲಿ ಕೊನೆಯವರೆಗೆ ತಲುಪಿದ್ದು ಮೂವರೇ ಎಂದು ಟ್ರೆಕ್ ಲೀಡ್ ನ ಬಳಿ ಚರ್ಚಿಸುತ್ತಿದ್ದೆ. ಅವರೂ ನಿರಾಶೆಯಿಂದ ತಲೆಯಾಡಿಸುತ್ತಿದ್ದರು. ಇನ್ನೇನು ಎದ್ದು ಹೊರಡಬೇಕು ಎಂದನಿಸುವಷ್ಟರಲ್ಲಿ , ಯಾರೋ ದೂರದಲ್ಲಿ ಕೈ ಬೀಸುತ್ತಾ ಬರುತ್ತಿದ್ದರು. ಪರಿಚಿತವಾದ ಮುಖವೇ. ಅಲ್ಲೆಲ್ಲೋ ಕೆಳಗೆ ನಾವು ಬಿಟ್ಟು ಬಂದಿದ್ದ ಕಾಲು ನೋವಿನ ಗೆಳೆಯ !!!!!! ಅದೆಷ್ಟು ಆನಂದವಾಯಿತು ಎಂದು ಬಣ್ಣಿಸಲು ಸಾಧ್ಯವಿಲ್ಲ!! ಒಬ್ಬಂಟಿಯಾಗಿ ಅಲ್ಲಿಂದ ಕೊನೆಯವರೆಗೆ ಬಂದ ವೀರನಾತ. ಎಷ್ಟು ಮೆಚ್ಚಿದರೂ ಕಮ್ಮಿಯೇ. ಇಡೀ ಟ್ರೆಕ್ ಗೆ ಆತನ ಸಾಹಸ ಪರಿಪೂರ್ಣತೆಯನ್ನು ನೀಡಿತ್ತು. ಸಮಯ ಮೀರುವ ಮೊದಲು ತಲುಪಬೇಕು ಎಂದು ಕೂಡಲೇ ಹೊರಟೆವು. ಸ್ವಲ್ಪ ಹೊತ್ತಿನಲ್ಲೇ ನಮ್ಮ ಗುಂಪಿನ ಇನ್ನಿಬ್ಬರೂ ಎದುರಾದರು. ಒಟಿನಲ್ಲಿ , 6 ಮಂದಿ ಕೊನೆಯವರೆಗೆ ತಲುಪಿದ್ದೆವು. ಹತ್ತುವಾಗ ಅದೆಷ್ಟು ಸವಾಲುಗಳು ಇದ್ದವೋ , ಅದಕ್ಕಿಂತ ಭೀಕರವಾದ ಸವಾಲು ಇಳಿಯುವಾಗ ಇರುತ್ತದೆಯೆಂದು ನಾನು ಊಹಿಸಿರಲಿಲ್ಲ. ಒಂದೇ ಒಂದು ತಪ್ಪು ಹೆಜ್ಜೆಯಿಟ್ಟರೂ ಸಾಕು. ಧರಧರನೆ ಉರುಳಿ ಗುರುತೂ ಸಿಗದ ಸ್ಥಿತಿ ತಲುಪಿಬಿಡುತ್ತೇವೆ. ಪ್ರತಿ ಹೆಜ್ಜೆ ಇರಿಸಿದಾಗಲೂ ಮಂಡಿ ನೋವಾಗುತ್ತಿತ್ತು. ಅಂದು ಸಂಜೆ ಚೆಕ್ ಪೋಸ್ಟ್ ತಲುಪಿ , ಭಟ್ರು ಮನೆಯಲ್ಲಿ ಊಟ ಮಾಡಿ , ಟೆಂಟ್ ನಲ್ಲಿ ಮಲಗಿ , ಮರುದಿನ ಮುಂಜಾನೆ ಬೇಗನೆ ಎದ್ದು , ಕೆಳಗಿಳಿಯುವಾಗ ಒಂದು ಲೀಚ್ ಎದುರಾಗಿದ್ದು ಬಹಳ ಆನಂದ ನೀಡಿತ್ತು. ಇನ್ನೇನು ಟ್ರೆಕ್ ಮುಗಿಯಲಿಕ್ಕಿತ್ತು. ಅಡ್ಡ ಬಿದ್ದಿದ್ದ ಮರವೊಂದರ ಮೇಲೆ ಕೈಯಿರಿಸಿ ಜಾರುವುದರಿಂದ ತಪ್ಪಿಸಿಕೊಂಡು ನಿಟ್ಟುಸಿರು ಬಿಟ್ಟೆ. ಆಗ ಒಂದು ವಿಚಾರ ಕಾಡತೊಡಗಿತು. ಈಗಲೂ ಕಾಡುತ್ತಿದೆ. ಯಾವ ಕಾಡು ಹಾಗು ಮರಗಳನ್ನು ನಾಶಪಡಿಸಿ ಇಂದು ನಾವು ಮೆರೆದಾಡುತ್ತಿದ್ದೇವೋ , ಅವುಗಳದ್ದೇ ಸಂಬಂಧಿಕರ ರೆಂಬೆ ಕೊಂಬೆಗಳಿಗೆ ತಮ್ಮ ಜೀವದ ಹೊಣೆಗಾರಿಕೆಯನ್ನು ವಹಿಸಿ , ಅನೇಕರು ಸಾಧಿಸುವ ಸಾಹಸವೇ ಟ್ರೆಕ್ ತಾನೆ ?!

ಕುಮಾರಪರ್ವತ – ಭಾಗ – ೨

ಟ್ರೆಕ್ ಗೆ ತೆರಳುವಾಗ ಕೆಲವು ವಿಚಾರಗಳನ್ನು ನೆನಪಿಡಬೇಕು . ಅದೆಷ್ಟೇ ಕಷ್ಟವಾದರೂ , ಕೇವಲ ಮೂಗಿನಿಂದ ಉಸಿರಾಡಬೇಕು . ನೀವು ಏದುಸಿರು ಬಿಡುತ್ತಾ ಬಾಯಿಯಿಂದ ಉಸಿರಾಡಿದರೆ , ತುಂಬಾ ಬೇಗ ಸುಸ್ತಾಗುತ್ತದೆ . ಅತಿಯಾಗಿ ಬಾಯಾರಿಕೆ ಆದರೂ , ಸ್ವಲ್ಪವೇ ನೀರು ಕುಡಿಯಬೇಕು. ಅಗತ್ಯವಿಲ್ಲದ ಯಾವುದೇ ವಸ್ತುವನ್ನು ಅಪ್ಪಿತಪ್ಪಿಯೂ ಹೊತ್ತಕೊಂಡು ಹೋಗಬಾರದು. ನಾನು ಈ ಮೂರೂ ತಪ್ಪುಗಳನ್ನು ಮಾಡಿದ್ದೆ. ಪಯಣದುದ್ದಕ್ಕೂ ನನ್ನ ರೂಮ್ ಮೇಟ್ ನಾನು ಉಸಿರಾಟದ ಹಾಗು ನೀರಿನ ವಿಚಾರದಲ್ಲಿ ಮಾಡುತ್ತಿದ್ದ ತಪ್ಪನ್ನು ಮತ್ತೆ ಮತ್ತೆ ತಿದ್ದುತ್ತಿದ್ದ. ಆದರೆ , ಮೊದಲ ಟ್ರೆಕ್ ಗೇ ಕುಮಾರಪರ್ವತವನ್ನು ಆಯ್ದುಕೊಂಡದ್ದಕ್ಕೆ ಉಡುಗೊರೆಯಾಗಿ , ನನ್ನ ಮನಸ್ಸು ಯಾವುದನ್ನೂ ಕೇಳಲು ಒಪ್ಪುತ್ತಿರಲಿಲ್ಲ. ಲೆಕ್ಕಾಚಾರ ಈ ರೀತಿ ಇತ್ತು. ಸಮಯ ಮೀರುವ ಮೊದಲು ಚೆಕ್ ಪೋಸ್ಟ್ ತಲುಪಬೇಕು. ಅಲ್ಲಿ ಟೆಂಟ್ ಹಾಗು ಇನ್ನಿತರ ವಸ್ತುಗಳನ್ನೆಲ್ಲಾ ಇರಿಸಿ , ಅನುಮತಿ ಪಡೆದು , ಕಲ್ಲು ಮಂಟಪ ತಲುಪಬೇಕು . ಅಲ್ಲಿಂದ ಶೇಷಪರ್ವತ . ಅದಾದಮೇಲೂ ಏನಾದರು ಅಲ್ಪಸ್ವಲ್ಪ ಶಕ್ತಿ ಉಳಿದಿದ್ದರೆ ಕುಮಾರಪರ್ವತ ! ಒಟ್ಟಿನಲ್ಲಿ ನಾನು ಅಂದುಕೊಂಡಿದ್ದ ಹಾಗೆ ಕುಮಾರಪರ್ವತದ ಕೊನೆ ಕೇವಲ ಒಂದು ಬೆಟ್ಟ ಹತ್ತಿದರೆ ತಲುಪುವ ಜಾಗವಲ್ಲ . ಅದೆಷ್ಟೋ ಬೆಟ್ಟಗಳನ್ನು ಹತ್ತಿದ ನಂತರ ಕುಮಾರಪರ್ವತ ತಲುಪುತ್ತೇವೆ!

ನಮ್ಮ ಜೊತೆಗಿದ್ದ ಟ್ರೆಕ್ ಲೀಡ್ ಗೆ ಸುಸ್ತಾಗುವುದಿಲ್ಲವೇ ಎಂದು ಆಲೋಚಿಸುತ್ತಾ , ಹೆಜ್ಜೆಯಿಡುತ್ತಿದ್ದೆ . ಒಂದೇ ಸಮನೆ ಉತ್ಸಾಹದಿಂದ ನಮ್ಮನ್ನು ಕರೆದು ಆಕೆ ಹಾವು ಎಂದು ತೋರಿಸುವಷ್ಟರಲ್ಲಿ ಅದು ಮರೆಯಾಗಿತ್ತು. ಎಲ್ಲವನ್ನೂ ಮರೆತು ಒಮ್ಮೆ ತಲುಪಿದರೆ ಸಾಕು ಎಂದು ಆಲೋಚಿಸುತ್ತಿದ್ದ ನನ್ನನ್ನು , ಪರಿಸರವನ್ನೂ ಗಮನಿಸಿ ಆನಂದಿಸುವಂತೆ ಆ ಘಟನೆ ಎಚ್ಚರಿಸಿತ್ತು. ಇಡೀ ಪಯಣದಲ್ಲಿ ಆಕೆ ಸುಸ್ತಾದಂತೆ ಕಂಡದ್ದು ನನಗೆ ನೆನಪಿಲ್ಲ. ಮೆಚ್ಚಬೇಕಾದ ವಿಚಾರವೆಂದರೆ , ತನ್ನ ಬಗ್ಗೆ ಹೆಚ್ಚು ಆಲೋಚಿಸದೆ , ಇಡೀ ತಂಡದ ಬಗ್ಗೆ ಕಾಳಜಿ ವಹಿಸಿ , ಎಲ್ಲರನ್ನೂ ಹುರಿದುಂಬಿಸಿ , ಆಕೆ ಮುನ್ನಡೆಸಿದ ರೀತಿ . ನಮ್ಮ ತಂಡ ಮೂರು ಗುಂಪುಗಳಾಗಿ ದೂರವಾಗಿತ್ತು. ಎದುರಿನಲ್ಲಿ ನಾನು , ರೂಮ್ ಮೇಟ್ , ಟ್ರೆಕ್ ಲೀಡ್ , ಈ ಹಿಂದೆ ತಿಳಿಸಿದ ಹೊಸ ಗೆಳೆಯ ಹಾಗು ಇನ್ನಿಬ್ಬರು. ಒಂದಿಷ್ಟು ಮಂದಿ ಇನ್ನೊಂದು ಟ್ರೆಕ್ ಲೀಡ್ ನ ಜೊತೆ ನಮ್ಮ ಹಿಂದೆ ತುಸು ದೂರದಲ್ಲಿ ಬರುತ್ತಿದ್ದರು. ಉಳಿದವರು ಮತ್ತೋರ್ವ ಪರಿಣಿತನ ಜೊತೆ , ಅವರಿಗಿಂತಲೂ ಹಿಂದೆ. ಒಟ್ಟಿನಲ್ಲಿ ಕೊನೆಯ ತನಕ ತಲುಪಬೇಕಾದರೆ ವೇಗವಾಗಿ ಸಾಗಬೇಕಾಗಿತ್ತು. ಏಕೆಂದರೆ ಸಂಜೆಯಾಗುವುದರೊಳಗೆ ಚೆಕ್ ಪೋಸ್ಟ್ ಗೆ ಹಿಂದಿರುಗಲೇಬೇಕು.

ಇರುವ ಶಕ್ತಿಯನ್ನೆಲ್ಲಾ ಬಳಸಿ ಹೇಗಾದರೂ ಮಾಡಿ ಚೆಕ್ ಪೋಸ್ಟ್ ತಲುಪಿಬಿಡಬೇಕು ಎಂದು ನಿರ್ಧರಿಸಿದ್ದೆ. ಆದರೆ ಅದೆಷ್ಟು ನಡೆದರೂ ಅದನ್ನು ತಲುಪುವ ಲಕ್ಷಣ ಕಾಣುತ್ತಿರಲಿಲ್ಲ. ಹಿಂದಿನ ದಿನ ಬೆಟ್ಟ ಹತ್ತಿದ್ದ ಕೆಲವರು ನಮ್ಮ ವಿರುದ್ಧ ದಿಕ್ಕಿನಲ್ಲಿ ನಡೆದುಕೊಂಡು ಬರುತ್ತಿದ್ದರು. ಅದೇನೋ ಒಂದು ರೀತಿಯ ಗೌರವ ಮೂಡಿತ್ತು ಅವರ ಮೇಲೆ. ನನ್ನ ರೂಮ್ ಮೇಟ್ ಆಗ ಮೊದಲ ಬಾರಿಗೆ ಒಳ್ಳೆಯ ವಿಚಾರ ತಿಳಿಸಿದ. ಚೆಕ್ ಪೋಸ್ಟ್ ಹತ್ತಿರವಾಗುತ್ತಿದೆ ಎಂದು. ಅದೆಷ್ಟು ಕೇಳಿದರೂ ಬಾಯಿಬಿಡದ ಟ್ರೆಕ್ ಲೀಡ್ ಕೂಡ ಈ ವಿಚಾರಕ್ಕೆ ಸಮ್ಮತಿಸೂಚಿಸುವ ರೀತಿಯಲ್ಲಿ ಹೆಜ್ಜೆಹಾಕುತ್ತಿದ್ದರು. ಕೊನೆಗೂ ಚೆಕ್ ಪೋಸ್ಟ್ ತಲುಪಿದೆವು . ನಳ್ಳಿಯಲ್ಲಿ ಬಂದ ನೀರನ್ನು ಮುಖದ ಮೇಲೆ ಎರಚಿದಾಗ , ವಿಲವಿಲ ಒದ್ದಾಡುತ್ತಿದ್ದ ಮೀನನ್ನು , ಸಮುದ್ರಕ್ಕೆ ಸೇರಿಸಿದಾಗ ಅದು ಮರುಜೀವ ಪಡೆವ ರೀತಿಯಂತಾಗಿತ್ತು ನಮಗೆ. ಟೆಂಟ್ ಒಂದನ್ನು ಸ್ಥಾಪಿಸಿ , ನಮ್ಮ ವಸ್ತುಗಳನ್ನೆಲ್ಲಾ ಅದರಲ್ಲಿರಿಸಿ , ಅನುಮತಿಯನ್ನೆಲ್ಲಾ ಪಡೆದು ಪಯಣ ಮುಂದುವರೆಸಿದೆವು. ಈಗ ಹೊರಲು ಭಾರವೇನೂ ಇರಲಿಲ್ಲ. ಆದರೆ ಇಲ್ಲಿಯವರೆಗೆ ಆಸರೆಯಾಗಿದ್ದ ಮರಗಳ ನೆರಳು ಮಾಯವಾಗಿತ್ತು. ಅತ್ಯಂತ ಉಗ್ರರೂಪದಲ್ಲಿ ಅಂದು ಕುದಿಯುತ್ತಿದ್ದ ಸೂರ್ಯನ ಕಿರಣಗಳು ನೇರವಾಗಿ ಮುಖಕ್ಕೆ ಹೊಡೆಯುತ್ತಿತ್ತು. ಇನ್ನೂ ಅದೆಷ್ಟೋ ಬೆಟ್ಟಗಳನ್ನು ಹತ್ತಬೇಕು. ಕಣ್ಣಿಗೆ ಕಾಣುತ್ತಿದ್ದ ಅತೀ ಎತ್ತರದ ಪ್ರದೇಶವನ್ನು ತೋರಿಸಿ , ” ಅದೇ ತಾನೆ ಕಲ್ಲು ಮಂಟಪ ? ” ಎಂದು ಕೇಳಿದೆ. ತಕ್ಷಣ ಒಂದು ಉತ್ತರ ಬಂತು. ” ಇಲ್ಲಿಂದ ಕಲ್ಲು ಮಂಟಪ ಕಾಣುತ್ತಲೇ ಇಲ್ಲ. ಅದಿನ್ನೂ ಬಹಳ ದೂರವಿದೆ” ಎಂದು. ಮುಂದೆ ನಡೆಯಲಾಗದೆ ಒಂದು ಬಂಡೆಯ ಮೇಲೆ ಕುಳಿತೆ . ಕಲ್ಲುಮಂಟಪವೇ ಅಷ್ಟು ದೂರವಿದೆ. ಅದಾದ ಮೇಲೆ ಶೇಷಪರ್ವತ . ಅದಾದಮೇಲೆ ಕುಮಾರಪರ್ವತ. ಅಸಾಧ್ಯವೆಂದನಿಸಿತು. ಈ ಸಂಧರ್ಭದಲ್ಲಿ ನೆರವಾದದ್ದು ನನ್ನ ಹೊಸ ಗೆಳೆಯನ ನೂರು ಹೆಜ್ಜೆಗಳ ತಂತ್ರ. ನೂರು ಹೆಜ್ಜೆಗಳ ನಂತರ ಒಂದು ಪುಟ್ಟ ವಿರಾಮ. ನಂತರ ಮತ್ತೆ ನೂರು ಹೆಜ್ಜೆಗಳು . ಹೇಗೋ ಹೆಜ್ಜೆಗಳನ್ನು ಇರಿಸುತ್ತಾ ಮುಂದೆ ಸಾಗುತ್ತಿದ್ದೆ. ನೀರು ಕುಡಿದ ಮರುಕ್ಷಣವೇ ಬಾಯಾರಿಕೆಯಾಗುತ್ತಿತ್ತು. ದೇಹದಲ್ಲಿ ಉಸಿರೇ ಇಲ್ಲವೇನೋ ಎನ್ನುವ ರೀತಿಯಲ್ಲಿ ಉಸಿರಾಡುತ್ತಿದ್ದೆ. ಮೆಲ್ಲಗೆ ಕಾಲು ನೋವೂ ಪ್ರಾರಂಭವಾಗಿತ್ತು. ಆರು ಜನರಿದ್ದ ನಾವು ಈಗ ನಾಲ್ಕು ಮಂದಿ ಮಾತ್ರ ಇದ್ದೆವು. ಇನ್ನಿಬ್ಬರು ಒಂದೆಡೆ ವಿಶ್ರಾಂತಿ ಪಡೆಯುತ್ತೇವೆಂದು ಕುಳಿತುಬಿಟ್ಟಿದ್ದರು. ನಾನು , ರೂಮ್ ಮೇಟ್ , ಹೊಸ ಗೆಳೆಯ ಹಾಗು ಟ್ರೆಕ್ ಲೀಡ್ . ಮುಂದೇನಾಗುವುದೋ ಎಂದು ಆಲೋಚಿಸುತ್ತಾ ನಡೆಯುತ್ತಿರಬೇಕಾದರೆ , ಸ್ವರ್ಗವೇ ಕಂಡಂತಾಯಿತು. ಕುದಿಯುತಿದ್ದ ಬೆಟ್ಟದ ಒಂದು ಬದಿಯಲ್ಲಿ ಮರಗಳ ನಡುವೆ ತಂಪಾದ ಬಂಡೆಗಳ ಮೇಲೆ , ಹಿಂದೆಂದೂ ಕುಡಿಯದಷ್ಟು ಶುಧ್ಧವಾದ ಅಮೃತದಂತಹ ನೀರು ಹರಿಯುತ್ತಿತ್ತು. ಮುಖದ ಮೇಲೆ ಎರಚಿದಷ್ಟೂ ಆನಂದ . ಇನ್ನೇನು ಚೇತರಿಸಿಕೊಂಡೆವು ಎನ್ನುವಾಗ , ಎದೆ ಬಡಿತ ಮತ್ತೇ ಹೆಚ್ಚಾಯಿತು. ನಮ್ಮೊಂದಿಗೆ ಇದ್ದ ಹೊಸ ಗೆಳೆಯ ಕಣ್ಮರೆಯಾಗಿದ್ದ.

ಕುಮಾರಪರ್ವತ -ಭಾಗ-೧

“ಬಸ್ ಎಷ್ಟೊತ್ತಿಗೆ ?” ಎಂದು ನನ್ನ ರೂಮ್ ಮೇಟ್ ಗೆ ಕೇಳುವಷ್ಟು ಗಟ್ಟಿಯಾಗಿ ಕಿರುಚುತ್ತಾ , ಅದಾಗಲೇ ಹತ್ತು ಬಾರಿ ಅಲೋಚಿಸಿ ಆಯ್ದುಕೊಂಡ ಬಟ್ಟೆ , ತಿಂಡಿಗಳನ್ನು ಪರಿಶೀಲಿಸುತ್ತಾ ಬ್ಯಾಗಿನ ಒಳಗೆ ತುರುಕಿಸುತ್ತಿದ್ದೆ. ನನ್ನ ಬಳಿ ಇದ್ದ ಶೂ ಹಾಗು ಬ್ಯಾಗ್ , ಟ್ರೆಕ್ ಎಂಬ ಸಾಹಸವನ್ನು ಇನ್ನಷ್ಟು ಕಠಿಣಗೊಳಿಸಲಿವೆ ಎಂಬುದು ಆಗಲೇ ನನಗೆ ತಿಳಿದಿತ್ತು . ಅವೆರಡೂ ಈ ಪಯಣಕ್ಕೆ ಸಾಟಿಯಾಗದ ಸಂಗಾತಿಗಳು. ಆದರೆ ಬೇರೆ ಆಯ್ಕೆಯೂ ಇರಲಿಲ್ಲ. ನಾನು ಜೀವಮಾನದಲ್ಲಿ ಕೈಗೊಂಡ ಈ ಮೊದಲ ಟ್ರೆಕ್ ನ ಹಿಂದಿನ ರೂವಾರಿಯೇ ನನ್ನ ರೂಮ್ ಮೇಟ್. ಆತ ಅದು ಯಾವ ರೀತಿಯಲ್ಲಿ ವಿವರಿಸಿದ್ದನೋ ನೆನಪಿಲ್ಲ. ಸುಮಾರು ಎರಡು ತಿಂಗಳು ಹಿಂದಿನ ಸಮಯ. ಆತ ಕುಮಾರಪರ್ವತ ಟ್ರೆಕ್ ಇದೆ ಎಂದೂ , ತಾನು ಹಿಂದೊಮ್ಮೆ ಹೋಗಿದ್ದೇನೆಂದೂ ಹೇಳಿದ್ದಷ್ಟೇ ನೆನಪಿದೆ. ನಾನೂ ಬರುತ್ತೇನೆಂದು ಉತ್ಸಾಹದಲ್ಲಿ ತಿಳಿಸಿಬಿಟ್ಟೆ . ಇನ್ನಿಬ್ಬರು ಗೆಳೆಯರೂ ಸೇರಿಕೊಂಡರು. ಆದರೆ ಕೆಟ್ಟ ಹವಾಮಾನದಿಂದಾಗಿ ಅದು ಮುಂದೂಡಲ್ಪಟ್ಟು , ಕೊನೆಗೂ ಈ ತಿಂಗಳಿನಲ್ಲಿ ಒಂದು ಮುಹೂರ್ತ ನಿಗದಿಯಾಗಿತ್ತು. ” ಈ ಬಾರಿ ನಾವು ಹೋಗದಿದ್ದರೆ , ಮುಂದೆಂದೂ ಖಂಡಿತವಾಗಿಯೂ ಹೋಗುವುದಿಲ್ಲ ” ಎಂದು ಆತ ಹೇಳಿದಾಗ ನನಗೂ ಹೌದೆನಿಸಿ , ಹೋಗೋಣವೆಂದಿದ್ದೆ. ಕಾರಣಾಂತರಗಳಿಂದ ಇನ್ನಿಬ್ಬರು ಗೆಳೆಯರಿಗೆ ಬರಲಾಗುವುದಿಲ್ಲ ಎಂದು ತಿಳಿಯಿತು .

ಎಲ್ಲವೂ ನಿಗದಿಯಾದ ಮೇಲೆ ನನ್ನ ರೂಮ್ ಮೇಟ್ ಈ ಟ್ರೆಕ್ ಗೆ ಸಂಬಂಧಿಸಿದ ಭಾಯಾನಕ ವಿಚಾರಗಳನ್ನು ಒಂದೊಂದಾಗಿ ಬಯಲು ಮಾಡತೊಡಗಿದ. ಅಲ್ಲಿ ಎದುರಾಗುವ ಎತ್ತರವಾದ ಬೆಟ್ಟಗಳು , ಆಗಾಗ ಕಾಣಿಸಿಕೊಂಡು ಕಷ್ಟ ಸುಖ ವಿಚಾರಿಸುವ ಲೀಚ್ ಹಾಗು ಹಾವುಗಳು , ನಿರ್ಜೀವವಾಗಿಬಿಡುವ ದೇಹದ ಯಾತನೆ , ಅಲ್ಲಿನ ಭಟ್ರುಮನೆಯ “ರುಚಿಯಾದ” ಊಟ .. ಹೀಗೆ ಆತ ತಿಳಿಸಿದ ಪ್ರತಿ ವಿಚಾರವನ್ನೂ ನೆನಪಿಸಿಕೊಳ್ಳುತ್ತಾ ಪ್ರಯಾಣ ಪ್ರಾರಂಭವಾಗಿತ್ತು. ಬಸ್ ಹತ್ತಬೇಕಿದ್ದ ಸ್ಥಳಕ್ಕೆ ತುಂಬಾ ಬೇಗನೇ ತಲುಪಿ , ಹಾಯಾಗಿ ಊಟ ಮಾಡಿ ..ಮುಂದಿನೆರಡು ದಿನಗಳಲ್ಲಿ ನಡೆಯಲಿದ್ದ ಘಟನೆಗಳ ಬಗ್ಗೆ ಊಹಿಸುತ್ತಾ ಕುಳಿತೆವು . ಅಲ್ಲಿ ನಾವು ಊಹಿಸಿಕೊಂಡ ವಿಚಾರಗಳನ್ನು , ಕೇಳಿಸಿಕೊಂಡು ಕುಮಾರಪರ್ವತ ಅದೆಷ್ಟು ನಕ್ಕಿರಬಹುದೋ ಏನೋ. ಏಕೆಂದರೆ ಮುಂದೆ ನಡೆದದ್ದೇ ಬೇರೆ. ಟ್ರೆಕ್ ಆಯೋಜಿಸುವ ಸಂಸ್ಥೆಯೊಂದರ ಸಹಾಯದೊಂದಿಗೆ ನಾವು ಈ ಟ್ರೆಕ್ ಪೂರ್ಣಗೊಳಿಸಲಿದ್ದೆವು . ಬಸ್ ಬದಲಿಗೆ ಬಂದ ಟಿ.ಟಿಯನ್ನು ಹತ್ತಿ , ಅದರಲ್ಲಿದ್ದ ಹೊಸ ಮುಖಗಳ ಪರಿಚಯವಾದ ಜೊತೆಗೆ ನಮ್ಮ ಈ ಇಡೀ ಪಯಣದುದ್ದಕ್ಕೂ ಜೊತೆಯಾಗಿ ನಿಂತು ಸಹಕರಿಸಿದ ಇಬ್ಬರು ಟ್ರೆಕ್ ಪರಿಣಿತರ ಪರಿಚಯವೂ ಆಯಿತು . ಮುಂಜಾನೆ ತುಂಬಾ ಬೇಗನೇ ಕುಕ್ಕೆ ತಲುಪಿ , ಹೋಟೆಲ್ ಒಂದರಲ್ಲಿ ಟ್ರೆಕ್ ಗೆ ತಯಾರಾಗುತ್ತಿರಬೇಕಾದರೆ , ನನ್ನ ರೂಮ್ ಮೇಟ್ ಮಾಡಿದ ಅದ್ಭುತ ಕೆಲಸವೊಂದು ಬಯಲಾಯಿತು . ಅದು ಹೇಗಾಯಿತೆಂದು ಇನ್ನೂ ಅರ್ಥವಾಗಿಲ್ಲ. ಟ್ರೆಕ್ ಗೆ ಬಂದು , ಶೂ ಅನ್ನು ರೂಮ್ ನಲ್ಲಿಯೇ ಬಿಟ್ಟುಬಂದಿದ್ದ ಆತ ! ಪುಣ್ಯಕ್ಕೆ ನಮ್ಮ ಜೊತೆಯಲ್ಲಿದ್ದವರೊಬ್ಬರ ಬಳಿ ಇನ್ನೊಂದು ಜೊತೆ ಶೂ ಇತ್ತು. ಸಾಕ್ಸ್ ಇಲ್ಲದೆ , ಅಪರಿಚಿತ ಶೂನಲ್ಲಿ ಇಡೀ ಕುಮಾರಪರ್ವತವನ್ನು ಹತ್ತಿಳಿಯಬೇಕಿತ್ತು ಆತ ! ಆ ವಿಚಾರವಿನ್ನೂ ಮನಸಿನಲ್ಲಿ ಓಡಾಡುತ್ತಿರಬೇಕಾದರೆ , ಇನ್ನೊಂದು ಅದ್ಭುತ ದೃಶ್ಯ ಕಾಣುವ ಸೌಭಾಗ್ಯ ದೊರಕಿತು. ನಾವು ರಾತ್ರಿ ಇಡೀ ಪ್ರಯಾಣಿಸಿ ಬಂದಿದ್ದ ಟಿ.ಟಿಯ ಎದುರಿನ ಟಯರ್ ಪಂಚರ್ ಆಗಿತ್ತು !! ಅದನ್ನು ಕಂಡು ಬೆಚ್ಚಿಬಿದ್ದ ನಾನು ತಲೆಎತ್ತಿ ನೋಡಿದಾಗ , ಅದರ ಡ್ರೈವರ್ ಸೀಟ್ ಒರಗಿಸಿ ಹಾಯಾಗಿ ಮಲಗಿದ್ದ . ಯಾವ ಸಮಯದಲ್ಲಿ ಪಂಚರ್ ಆಯಿತೋ , ಆತನಿಗೆ ಅದು ತಿಳಿದಿದೆಯೋ ಇಲ್ಲವೋ ಎಂದು ಆಲೋಚಿಸುತ್ತಿರುವಾಗಲೇ ಹೊರಡಬೇಕು ಎಂಬ ಸೂಚನೆ ಬಂತು . ಒಂದೆಡೆ ಮಲಗಿದ್ದ ನಮ್ಮ ಡ್ರೈವರ್ ನನ್ನು ಎಬ್ಬಿಸಿ ಯಾರೋ ಇಬ್ಬರು ವಿಚಾರಿಸುತ್ತಿರಬೇಕಾದರೆ , ನಾವು ನಮ್ಮದೇ ಗುಂಪಿನ ಇನ್ನೊಂದು ಬಸ್ ಹತ್ತಿ ತಿಂಡಿ ತಿನ್ನಲು ಹೊರಟೆವು.

ತಿಂಡಿ ತಿಂದು , ರಾತ್ರಿಗೆ ಬೇಕಾದ ಟೆಂಟ್ ಹಾಗು ಸ್ಲೀಪಿಂಗ್ ಬ್ಯಾಗ್ಅನ್ನು ಪಡೆದು , ಟ್ರೆಕ್ ಪ್ರಾರಂಭಿಸಿದಾಗ ಸಮಯ ಬೆಳಗ್ಗೆ 8 : 30. ಮೊದಲ ಹದಿನೈದು ನಿಮಿಷ ಎಲ್ಲರೂ ಬಹಳ ಉತ್ಸಾಹದಿಂದ ಹತ್ತಿದರು ಎಂದೇ ಹೇಳಬೇಕು . ಏಕೆಂದರೆ ನಾನು ಉತ್ಸಾಹವನ್ನು ನೋಡಿದ್ದು ಅದೇ ಕೊನೆಯ ಬಾರಿಗೆ. ಅಲ್ಲಿದ್ದ ಗಾಳಿಯನ್ನು ಬಾಯಿ , ಮೂಗು ಎರಡರಿಂದಲೂ ಸಾಧ್ಯವಾದಷ್ಟು ಹೀರಿಕೊಳ್ಳುತ್ತಾ , ಮೈ ತುಂಬಾ ಬೆವರನ್ನು ಹೊತ್ತುಕೊಂಡು ..ಇನ್ನೂ ಅದೆಷ್ಟು ದೂರವಿದೆಯೋ ಎಂದು ಎಲ್ಲರೂ ಹೆಜ್ಜೆ ಇಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಾನು ಸಾಧ್ಯವಾದಷ್ಟು ಮುಂದಿರಲು ಪ್ರಯತ್ನಿಸುತ್ತಿದ್ದೆ. ನನ್ನ ರೂಮ್ ಮೇಟ್ ಅದಾಗಲೇ ಎಲ್ಲೋ ಎದುರು ಹೋಗಿ ಕಣ್ಮರೆಯಾಗಿದ್ದ. ಒಂದು ಕ್ಷಣ ಹೇಗಿತ್ತೆಂದರೆ , ಎದುರು ನೋಡಿದಾಗ ಯಾರೂ ಕಾಣುತ್ತಿರಲಿಲ್ಲ , ಹಿಂದೆ ನೋಡಿದಾಗಲೂ ಯಾರೂ ಇರಲಿಲ್ಲ ! ಅಕ್ಕ ಪಕ್ಕದ ಹುಲ್ಲುಗಳ ನಡುವೆ ಎನೋ ಅಗಾಗ ಓಡಾಡುತ್ತಿರುವ ಸದ್ದು . ಎಂತಹ ಮೌನವೆಂದರೆ , ನನ್ನ ಉಸಿರೇ ನನಗೆ ಭಯಾನಕವಾಗಿ ಕೇಳಿಸುತ್ತಿತ್ತು. ವಿಚಿತ್ರವಾದ ವಿಚಾರಗಳು ಮನಸಿನಲ್ಲಿ ಓಡಾಡಿ ಇನ್ನೇನು ನಡುಕ ಹುಟ್ಟುತ್ತದೆ ಎಂದನಿಸುವಷ್ಟರಲ್ಲಿ , ಬಂಡೆ ಒಂದರ ಮೇಲೆ ಕುಳಿತು ಮೂವರು ಮಾನವರು ನನ್ನನ್ನು ದಿಟ್ಟಿಸುತ್ತಿದ್ದ ದೃಶ್ಯ ಕಂಡು ಬಂತು . ಅವರೇ ನನ್ನ ರೂಮ್ ಮೇಟ್ , ಟ್ರೆಕ್ ಲೀಡ್ ಹಾಗು ಇನ್ನೊಬ್ಬ . ಆ ಇನ್ನೊಬ್ಬನೊಂದಿಗೆ ನನ್ನ ಪರಿಚಯ ಮಾಡಿಕೊಳ್ಳುತ್ತಾ , ಒಂದಷ್ಟು ದೂರ ಸಾಗಿ , ಇನ್ನೇನು ತಲುಪಬಹುದು ಎಂದು ನಾನು ಲೆಕ್ಕಾಚಾರ ಹಾಕುತ್ತಿರಬೇಕಾದರೆ , ನನ್ನ ರೂಮ್ ಮೇಟ್ ಎದೆ ಬಡಿತವನ್ನು ಒಂದು ಕ್ಷಣ ನಿಲ್ಲಿಸುವಂತಹ ವಿಚಾರವನ್ನು ತಿಳಿಸಿದ. ಅದುವೇ ” ನಿಜವಾದ ಟ್ರೆಕ್ ಇನ್ನು ಪ್ರಾರಂಭವಾಗಬೇಕಷ್ಟೇ. ”

ಟೀ ಕುಡಿತಿರಾ ಸರ್ ?

ಅಂಗಡಿ ತೆರೆಯುವ ಮುನ್ನವೇ ತಲುಪಬೇಕು ಎಂದು ಲೆಕ್ಕಾಚಾರ ಹಾಕಿದ್ದರೂ , ತುಸು ತಡವಾಗಿ ತಲುಪಿದ್ದೆ. ಅಗತ್ಯವಿಲ್ಲದ ಯಾವುದೋ ವಿಚಾರದ ಬಗ್ಗೆ ತಲೆಕೆಡಿಸಿಕೊಂಡು ಹಿಂದಿನ ರಾತ್ರಿ ನಿದ್ರೆಗೆ ಜಾರದೆ , ಹೇರ್ ಕಟ್ ಮಾಡಿಸಿಕೊಳ್ಳುವ ಶುಭ ಘಳಿಗೆ ಬಂದಿರುವ ವಿಚಾರದ ಬಗ್ಗೆ ಆಲೋಚಿಸಿ , ನಾಳೆ ಮುಂಜಾನೆಯೇ ಮುಹೂರ್ತ ಎಂದು ನಿರ್ಧರಿಸಿ ಮಲಗಿದ್ದು ಮತ್ತೆ ನೆನಪಾಯಿತು . ಅದೆಷ್ಟೋ ವಿಚಾರಗಳ ಬಗ್ಗೆ ನಿರಂತರವಾಗಿ ಆಲೋಚಿಸುತ್ತಾ ಬದುಕುತ್ತಿರುವಾಗ , ಹೇರ್ ಕಟ್ ಎಂಬ ಸಂದರ್ಭ ಅವೆಲ್ಲದಕ್ಕೂ ಒಂದು ವಿರಾಮ ನೀಡುತ್ತದೆ . ಹೇರ್ ಕಟ್ ಮಾಡುವವನ ಕೈಚಳಕವನ್ನು ಗಮನಿಸುತ್ತಾ , ಆತ ತಿಳಿಸುವ ಹಾಗು ಕೇಳುವ ಕುತೂಹಲಕಾರಿ ವಿಚಾರಗಳಿಗೆ ಸ್ಪಂದಿಸುತ್ತಾ , ಹಿಂದೆಂದೂ ಇಷ್ಟವಾಗದ ಹಾಡು ಚೆನ್ನಾಗಿದೆಯಲ್ಲಾ ಎಂದು ಅವಲೋಕಿಸುತ್ತಾ ಹಾಯಾಗಿರುವ ಸಮಯವದು. ನಾನು ಅಲ್ಲಿಗೆ ತಲುಪಿದಾಗ , ಆತ ಆಗತಾನೆ ಬೀಗ ತೆಗೆದು ಬೇಕೋ ಬೇಡವೋ ಎಂಬಂತೆ ಅಂಗಳವನ್ನು ಒಂದಿಷ್ಟು ಗುಡಿಸಿ , ಪಕ್ಕದ ಅಂಗಡಿಯಲ್ಲಿ ಟೀ ಕುಡಿಯುತ್ತಾ ನಿಂತಿದ್ದ. ನಾನು ಬಂದಿರುವುದನ್ನು ಗಮನಿಸಿ , ” ಕೂತ್ಕೊಳಿ ಸರ್ , ಬರ್ತೀನಿ ” ಎಂದ. ಅಲ್ಲಿ ಎದುರಿಗಿದ್ದ ಕನ್ನಡಿಯಿಂದ ಆತನನ್ನೇ ದಿಟ್ಟಿಸುತ್ತಾ ಕುಳಿತೆ. ನಾನು ತುಸು ಗಡಿಬಿಡಿಯಲ್ಲಿ ಇದ್ದೇನೆ ಎಂದು ಅರಿತು , ಬೇಗನೇ ಟೀ ಕುಡಿದು ಬಂದ . ಅಂತಹ ಸಂದರ್ಭದಲ್ಲಿಯೂ ಕೆಲಸ ಪ್ರಾರಂಭಿಸದೆ , ಮೊದಲು ಅಲ್ಲಿದ್ದ ಕಸವನ್ನು ಗುಡಿಸಲು ನಿರ್ಧರಿಸಿದ ಆತನ ಶಿಸ್ತನ್ನು ಮೆಚ್ಚಬೇಕು . ಕಸಗುಡಿಸುತ್ತಿರುವಾಗ ನನ್ನನ್ನು ನೋಡಿ , ” ಟೀ ಕುಡಿತಿರಾ ಸರ್ ? ” ಎಂದು ಕೇಳಿದ. ನನಗೆ ಸಿಟ್ಟು ಬರದೆ ಇರಲಿ ಎಂದು ಸಮಾಧಾನಪಡಿಸುವ ಸಲುವಾಗಿ ಆತ ಕೇಳಿರಬಹುದು . ಆದರೆ , ಕಳೆದುಹೋಗಿರುವ ಮಾನವ ಸಂಬಂಧದ ಕಾಳಜಿಯನ್ನೊಮ್ಮೆ , ತಿಂಡಿ ತಿನ್ನುವ ಮೊದಲೇ ಕೆಲಸ ಪ್ರಾರಂಭಿಸುವಾತ ನೆನಪಿಸಿದ್ದು ಸುಳ್ಳಲ್ಲ ತಾನೆ ?

ಎಷ್ಟಮ್ಮ ಕೆ.ಜಿಗೆ?

ಬೀದಿ ವ್ಯಾಪಾರಿಗಳ ಬಳಿ ಎನ್ನನಾದರೂ ಖರೀದಿಸಲು ಹೋಗುವಾಗ , ನಮ್ಮಲ್ಲಿ ಒಂದು ನಂಬಿಕೆ ಇದೆ. ಚೆನ್ನಾಗಿ ವ್ಯವಹರಿಸಿ , ಜಗಳವಾದರೂ ಆಡಿ , ಕಡಿಮೆ ಬೆಲೆಗೆ ಖರೀದಿಸಿದರೆ ನಾವು ಬುದ್ದಿವಂತರು ಹಾಗು ಚುರುಕು ಎಂದು ಕರೆಸಿಕೊಳ್ಳಲು ಸಮರ್ಥರು ಎಂದು . ಇದನ್ನು ಸಾಧಿಸುವ ಸಲುವಾಗಿ , ಅಲ್ಲಿ ನಡೆಯುವ ನಾಟಕೀಯ ಬೆಳವಣಿಗೆಗಳಲ್ಲಿ , ಅತ್ಯಂತ ಸುಂದರವಾದ ದೃಶ್ಯವೆಂದರೆ ..ಅಂಗಡಿಯವನಿಗೆ ಬೇಡ ಎಂದು ಹೇಳಿ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ , ಆತ ನಮ್ಮನ್ನು ವಾಪಸ್ಸು ಕರೆಯಲಿ ಎಂಬ ಪ್ರಾರ್ಥನೆಯೊಂದಿಗೆ ದೂರ ಸಾಗುವುದು . ಅದೇ ಯಾವುದಾದರೂ ಐಶಾರಾಮಿ ಮಳಿಗೆಗಳಲ್ಲಿ ಖರೀದಿಸುವಾಗ , ಈ ಯಾವುದೇ ಆಲೋಚನೆಗಳು ನಮ್ಮನ್ನು ಕಾಡುವುದಿಲ್ಲ. ಬದಲಿಗೆ , ನಾಲ್ಕು ಜನ ನೋಡುವಾಗ ಹೆಚ್ಚಿನ ಬೆಲೆಕೊಟ್ಟು ಖರೀದಿಸಿ , ಎದೆ ಉಬ್ಬಿಸಿಕೊಂಡು ಏನೋ ಸಾಧನೆ ಮಾಡಿರುವವರ ಹಾಗೆ ಹೊರ ನಡೆಯುತ್ತೇವೆ . ಮಾನವರು ಎಂದು ಸಾರಿಕೊಂಡು ಅಲೆದಾಡುವ ಆತ್ಮಗಳು , ಆಲೋಚಿಸಬೇಕಾದ ವಿಚಾರವೊಂದಿದೆ . ನಮ್ಮ ಹತೋಟಿಯಲ್ಲಿಲ್ಲದ ಮಳೆಯನ್ನು ಅವಲಂಬಿಸಿ , ಪರಿಚಯವೇ ಇಲ್ಲದ ಪೇಟೆಗೆ ಬಂದು , ಆಗಾಗ ಅಳುತ್ತಿರುವ ತನ್ನ ಕಂದನನ್ನು ಸಂತೈಸಿ , ತರಕಾರಿ ಮಾರುತ್ತಿರುವವಳೊಂದಿಗೆ ಚರ್ಚೆಮಾಡಿ , ಜಗಳವಾಡಿ ನಾವು ಏನನ್ನು ಸಾಧಿಸುತ್ತಿದ್ದೇವೆ ?!

ಟಿಕೆಟ್

ಬಸ್ ಕಂಡಕ್ಟರ್ ಎಂದರೆ , ಎಲ್ಲೋ ಕಳೆದುಹೋದ ನಮ್ಮ ಮನಸ್ಸನ್ನು ಎಚ್ಚರಿಸಿ ವಾಸ್ತವಕ್ಕೆ ಕರೆತರುವ ಹಿತೈಷಿ ಎಂಬುದು ನನ್ನ ನಂಬಿಕೆ . ಆತ ತುಂಬಾ ಅಲೋಚನೆಗಳು ಒಳಿತಲ್ಲವೆಂದೂ , ಈಗಿನ ಕ್ಷಣದ ಮೇಲೆ ಗಮನವಿರಲಿ ಎಂದು ತಿಳಿಸುವ ಗೆಳೆಯನೂ ಹೌದು. ಕೆಲವೊಮ್ಮೆ ತೀರಾ ಗಡಿಬಿಡಿಯಲ್ಲಿ ಇರುವ ನಮಗೆ , ಉಸಿರಾಡಲು ನೆನಪಿಸಿ , ತಾನು ಏನೂ ಮಾಡದ ಹಾಗೆ ತೆರಳುವಾತ. ಅದೆಷ್ಟೋ ಬಾರಿ , ಆತನೊಂದಿಗೆ ಭಿನ್ನಾಭಿಪ್ರಾಯ ಮೂಡಿದಾಗ , ನಮ್ಮ ಸಾವಿರಾರು ಕಷ್ಟಗಳು ನಮಗೇ ಗೊತ್ತು …ಅದೆಲ್ಲಾ ತಿಳಿಯದೆ ಇನ್ನಷ್ಟು ತೊಂದರೆ ನೀಡುತ್ತಾನೆ ಎಂದು ನಾವು ಆಲೋಚಿಸಬಹುದು. ಆದರೆ , ನಿಮಿಷಕ್ಕೊಂದು ನೂತನ ವ್ಯಕ್ತಿತ್ವದೊಂದಿಗೆ ವ್ಯವಹರಿಸಬೇಕಾದಾಗ ಎದುರಿಸುವ ಯಾತನೆಯನ್ನು ಯಾವ ಟಿಕೆಟಿನ ಮೇಲೆ ಬರೆದು ಆತ ತನ್ನ ಅಳಲು ವ್ಯಕ್ತಪಡಿಸಬೇಕು ?! ಬಗೆಹರಿಯದ ನೂರಾರು ಸಮಸ್ಯೆಗಳು ಹಾಗು ಈಡೇರದ ಅದೆಷ್ಟೋ ಬೇಡಿಕೆಗಳು ಬೆರೆತಿರುವ ಆ ಟಿಕೆಟ್ ಗೆ ಪ್ರತಿಯಾಗಿ , ಗೌರವ ಹಾಗು ಹೊಂದಾಣಿಕೆಯ ಸಾಂತ್ವಾನವನ್ನು ನಾವು ನೀಡಬಹುದಲ್ಲವೆ ?

ಅಪರಿಚಿತರು

ಅಪರಿಚಿತರ ನಡುವೆ ಕ್ಷಣಕಾಲ ಇರಲೂ ಹಿಂಜರಿಯುವ ಮನಸ್ಥಿತಿ ಹೆಚ್ಚಿನವರಲ್ಲಿ ಕಾಣಸಿಗುವ ಈ ಕಾಲದಲ್ಲಿ , ಅದಕ್ಕೆ ತದ್ವಿರುದ್ಧವಾಗಿ ಇರಲು ಬಯಸುವಾತ ನಾನು. ಕೆಲವು ಕ್ಷಣಗಳವರೆಗೆ ನಮ್ಮೊಂದಿಗೆ ಇದ್ದು , ನಾವು ಕೇಳದೆಯೂ ಅರಿವಿಲ್ಲದೆ ನಮಗೆ ಅವರು ತಲುಪಿಸುವ ಬದುಕಿನ ಸುಂದರ ವಿಚಾರಗಳೇ ಅದಕ್ಕೆ ಕಾರಣ. ಅಲ್ಲೊಂದು ಅರ್ಥಪೂರ್ಣ ಮೌನವಿದೆ . ಹೆಚ್ಚು ಪ್ರಶ್ನೆಗಳು ಮೂಡದೆಯೂ ಹುಟ್ಟುವ ಸ್ನೇಹವಿದೆ. ನಾವು ಕಲ್ಪಿಸದೇ ಉಳಿದು ಹೋದ ವಿಚಾರಗಳ ಸೂಚನೆಯಿದೆ . ಬಾಳ ಹೂವು ಅರಳಲಿ ಎಂದು ಆಸೆ ಪಡುತ್ತಿರುವ ನಮಗೆ , ಅವರ ಗಿಡವೇ ಬೆಳೆಯದ ಮನದಂಗಳದ ಪರಿಚಯ ಕಾದಿರುವ ಸಾಧ್ಯತೆಯಿದೆ . ಹಿಂದೆಂದೂ ನೋಡಿರದ ಕಣ್ಣುಗಳಲ್ಲಿ ಕಾಣಸಿಗುವ ಛಲ , ಬದುಕಿನುದ್ದಕ್ಕೂ ಒಳ್ಳೆಯ ಸಲಹೆಗಾರನಾಗಿ ಉಳಿಯುವ ಅವಕಾಶವಿದೆ. ಎಲ್ಲಕ್ಕಿಂತ ಮಿಗಿಲಾಗಿ , ನಮ್ಮನ್ನು ಒಂದಾಗಿ ಬೆಸೆಯುವ ನಿಸ್ವಾರ್ಥ ಮಿಡಿತವಿದೆ. ಒಂದು ನೂತನ ಮನಸ್ಸಿನ ಮೇಲೆ , ಹಿನ್ನಲೆಯೇ ಗೊತ್ತಿಲ್ಲದೆ ಮೂಡುವ ಕನಿಕರವೇ ತಾನೆ ನಾವು ಮನುಷ್ಯರು ಎಂಬ ನಂಬಿಕೆಗೆ ಶಾಶ್ವತವಾದ ಸಾಕ್ಷಿ ?

ದಡ ತಲುಪಿದ ಮೇಲೆ ?

ಅದೆಷ್ಟು ಬಾರಿ ಪ್ರಯತ್ನಿಸಿದರೂ , ಮನಸ್ಸನ್ನು ತೊರೆದುಹೋಗದ ವಿಚಾರ ಒಂದಿದೆ . ಇಂದಿನ ಕಷ್ಟಗಳಿಗಿಂತ ನಾಳೆಯ ತೊಂದರೆಗಳನ್ನು ಆಗಾಗ ನೆನಪಿಸಲು ಬರುವ ಚಿಂತೆ ಎಂಬ ಅತಿಥಿ. ಈ ನಿಶಬ್ದವಾದ ಗಲಾಟೆಯಲ್ಲಿ ನಾವು ನೋಡಲು ಮರೆಯುವ ಅಂದವೇ ಬದುಕು . ಎಲ್ಲವೂ ಅಂದುಕೊಂಡಂತೆ ನಡೆದರೆ , ಆನಂದ ಪಡುವ ಸಂದರ್ಭ ಬರುವುದಿಲ್ಲ ಎಂಬ ಈಗಾಗಲೇ ತಿಳಿದಿದ್ದರೂ ಮರೆತಿರುವ ವಿಚಾರ ಅದರ ರೂವಾರಿ . ಹೊಸ ಆಲೋಚನೆಗಳು , ನಮ್ಮನ್ನು ನಮಗೇ ಮತ್ತೆ ಪರಿಚಯಿಸುವ ಸಾಹಸಗಳು , ಅರಿವಿಲ್ಲದಂತೆ ಅರಿವಿಗೆ ಬರುವ ವಿಚಾರಗಳು , ಎಲ್ಲರನ್ನೂ ಒಂದಾಗಿಸುವ ನಿತ್ಯದ ಹೋರಾಟಗಳೆಲ್ಲವನ್ನೂ ಆನಂದಿಸದೆ , ಒಮ್ಮೆ ಎಲ್ಲವೂ ಮುಗಿದು ಹಾಯಾಗಿ ದಡ ತಲುಪಿದರೆ ಸಾಕು ಎಂದು ನಾವು ಏಕೆ ಬಯಸುತ್ತೇವೆ ?! ದಡ ತಲುಪಿದ ಮೇಲೆ ? ಮುಂದೇನು ಎಂದು ನೀವು ಚಿಂತಿಸದೆ ಇರುತ್ತೀರಾ ? ಒಂದು ವೇಳೆ ನೀವು ದಡ ತಲುಪಿದ ಮೇಲೆ ನಗೆ ಬೀರಿದರೂ , ಅದು ನೀವು ಹೋರಾಡಿ ತೇಲುತ್ತಾ ಬಂದ ಕಡಲನ್ನು ನೋಡಿದಾಗಲೇ ಅಲ್ಲವೆ ?