Featured

ಪರಿಚಯ

ಬದುಕಿನ ಅನುಭವಗಳನ್ನು ಹಂಚಿಕೊಳ್ಳುವ ಜೊತೆಗೆ , ಮೂಡುವ ಅನೇಕ ಪ್ರಶ್ನೆಗಳಿಗೆ ಲೇಖನಗಳ ಮೂಲಕ ಉತ್ತರ ಹುಡುಕಲು ಬಯಸುವ ಲೇಖಕ ನಾನು . ಕಾಲ್ಪನಿಕ ಜಗತ್ತಿಗಿಂತ , ದಿನನಿತ್ಯ ಕಾಣಸಿಗುವ ಸಣ್ಣದಾದರೂ ಬಹಳ ಅರ್ಥಪೂರ್ಣ ದೃಶ್ಯಗಳ ಮೇಲೆ ಆಸಕ್ತಿ ಜಾಸ್ತಿ.

ಸಮಾಚಾರ ?

ಹಲವಾರು ದಿನಗಳಿಂದ ಅನೇಕ ಬಾರಿ ನಿರಾಕರಿಸಿದರೂ ಮನದ ಹೊಸ್ತಿಲಿನಲ್ಲಿ ಓಡಾಡುತ್ತಿರುವ ಒಂದು ವಿಚಾರ ಗಮನ ಸೆಳೆಯುತ್ತಲೇ ಇದೆ . ನಿತ್ಯವೂ ನೋಡುತ್ತಿದ್ದ ಹಾಗು ಮನಸಾರೆ ಎಂದೂ ಒಪ್ಪದೆ ಕಡೆಗಣಿಸಿದ್ದ ದೃಶ್ಯಗಳು ಏಕೋ ಕಾಡುತ್ತಿದೆಯಲ್ಲಾ ?! ಇಷ್ಟರವರೆಗೆ ಮೆಚ್ಚಿರಲಿಲ್ಲ. ಹೆಚ್ಚೇನು ಗಮನಿಸಿರಲಿಲ್ಲ. ಈಗ ಆಗಾಗ ನೆನಪಾಗುತ್ತಿದೆ ಎಂದಾದರೆ ಅದು ಪ್ರಭಾವ ಬೀರಿದ್ದಾದರೂ ಯಾವಾಗ ?!ನಮಗೇ ತಿಳಿಯದ ಹಾಗೆ ಸೆರೆಯಾಗುವ ವಿಚಾರಗಳು ಬಹಳ ಕುತೂಹಲಕಾರಿ. ನಿತ್ಯವೂ ಓಡಾಡುತ್ತಿದ್ದ ಆ ದಾರಿ. ಎದುರಾಗುತ್ತಿದ್ದ ಮುಖಗಳು . ಕ್ಷಣಮಾತ್ರದಲ್ಲೇ ನಡೆದುಹೋಗುತ್ತಿದ್ದ ಪುಟ್ಟ ಪುಟ್ಟ ವಿಚಾರಗಳು. ನೂರಾರು ಅಂಗಡಿಗಳಿದ್ದರೂ , ಅದೇ ಒಂದು ನೆಚ್ಚಿನ ಅಂಗಡಿಯೆಡೆಗೆ ತೆರಳುತ್ತಿದ್ದ ರೀತಿ. ಅಲ್ಲಿ ಮಾಲಿಕನೊಂದಿಗೆ ನಡೆಯುತ್ತಿದ್ದ ನಿರ್ಜೀವ ಸಂಭಾಷಣೆ. ಅನೇಕ ಬಾರಿ ಕೆಲವು ವಿಚಾರಗಳನ್ನು ಮೆಚ್ಚಿದ್ದರೂ ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಓಡಾಡುತ್ತಿದ್ದ ದಿನಚರಿ. ಅನೇಕ ಅಸಮಾಧಾನಗಳೂ ಇದ್ದವು. ನಿತ್ಯವೂ ನೂತನ ವಿಚಾರದೆಡೆಗೆ ಸಾಗುತ್ತಿದ್ದ ಆಲೋಚನೆಗಳು. ನೆಮ್ಮದಿಯ ಹುಡುಕಾಟದಲ್ಲಿ ಮಗ್ನವಾಗಿದ್ದರೂ ಯಾವುದೇ ಸುಳಿವಿಲ್ಲದಂತೆ ಬೀರುತ್ತಿದ್ದ ಮಂದಹಾಸ. ಸಾಕಾಗಿ ಹೋಗಿದ್ದ ಹೋರಾಟದಲ್ಲಿ ತೊಡಗಿದ್ದರೂ , ಹೀಗೇ ಸಾಗಿರಲಿ ಎಂಬ ಬಯಕೆ.

ಇರುವಾಗ ಅರಿವಾಗದ , ಕಳೆದುಕೊಂಡ ಮೇಲೆ ಅರಿವಾಗಿ , ಮತ್ತೆ ದೊರಕಿದ ಮೇಲೆ ಅದೇ ನಿರಾಕರಣೆ ಮೂಡುವ ಮನಸ್ಥಿತಿಯ ರಹಸ್ಯವೇನಿರಬಹುದು ?! ಮನಸ್ಸಿಗೆ ಹತ್ತಿರವಾಗಿರುವ ಚೇತನಗಳ ಬಳಿ ಬದುಕಿನ ಸಮಾಚಾರ ಕೇಳಿದಾಗ ..ಕೇಳ ಸಿಗುವ ಉತ್ತರವೊಂದಿದೆ. ” ಹೆಚ್ಚೇನು ಇಲ್ಲ ಮಾರಾಯ …ಇದ್ದದ್ದೇ…ಮಾಮೂಲಿ .” ಹಾಗಾದರೆ ಯಾವುದಾದರೊಂದು ನೂತನವಾದ ಬದಲಾವಣೆ ನಡೆದುಬಿಟ್ಟರೆ …ನಾವು ಅದನ್ನು ಸ್ವಾಗತಿಸುತ್ತೇವೆ ಎಂಬುದು ನಿಜವೇ ? ಆ ” ಮಾಮೂಲಿ ” ಬದುಕು ಆಗ ಅದೇಕೆ ನೆಚ್ಚಿನ ತಾಣವಾಗಿ ಬದಲಾಗಿ ಬಿಡುತ್ತದೆ ?! ಪರಿಸ್ಥಿತಿ ಬದಲಾದಂತೆ ಬದಲಾಗುವ ಅಭಿಪ್ರಾಯಗಳಲ್ಲಿ ಒಂದು ವಿಚಾರ ಇದ್ದೇ ಇರುತ್ತದೆ. ಅದುವೇ ನಮ್ಮ ಅಸಮಾಧಾನ . ಒಂದು ವೇಳೆ ಆನಂದ ದೊರಕಿದರೂ ಮುಂದಿನ ತೊಂದರೆಗಳೆಡೆಗೆ ಮನಸ್ಸು ತೆರಳಿರುತ್ತದೆ. ಮಾಮೂಲಿ ಎಂದು ಕರೆಯುವ ಬದುಕಿನಲ್ಲಿ ಅಡಗಿರುವ ನೆಮ್ಮದಿಯನ್ನು ಹುಡುಕಿ , ಈಗ ಬರುತ್ತೇನೆಂದು ಹೇಳಿ ಅಲ್ಲೆಲ್ಲೋ ದೂರದಲ್ಲಿ ಬಿಟ್ಟುಬಂದಿರುವ ಕನಸುಗಳನ್ನು ಬಳಿಗೆ ಕರೆದು ಅರಿತುಕೊಂಡು ನಾಳೆಯೆಡೆಗೆ ಹೆಜ್ಜೆಯಿರಿಸಿದರೆ ?! ಕತ್ತಲು ಆವರಿಸಿದಾಗ , ಸೂರ್ಯೋದಯಕ್ಕಾಗಿ ಕಾಯುತ್ತ ..ಪರಿಸ್ಥಿತಿಯನ್ನು ದೂರಬಹುದು. ಅಥವಾ , ದೀಪ ಬೆಳಗಿ ಮುನ್ನಡೆಯಬಹುದು. ಎಲ್ಲಾ ಪರಿಸ್ಥಿತಿಗಳಲ್ಲೂ ಒಂದು ಒಳ್ಳೆಯ ಸಮಾಚಾರ ಅಡಗಿರುತ್ತದೆ. ಮುಂದಿನ ಬಾರಿ ಯಾರಾದರು ಸಮಾಚಾರ ಕೇಳಿದಾಗ …ಅದುವೇ ನಿಮ್ಮ ಉತ್ತರವಾಗಿರಲಿ.

ದಿನಪತ್ರಿಕೆ

ಯಾವುದಕ್ಕೂ ಸಮಯವಿಲ್ಲ ಎಂದುಕೊಂಡು ಕೊನೆಗೆ ಯಾವ ಕೆಲಸವನ್ನೂ ಮಾಡದೆ ಅನಗತ್ಯವಾಗಿ ಸಮಯ ವ್ಯರ್ಥ ಮಾಡುವ ದಿನಚರಿ ಸಾಮಾನ್ಯವಾಗಿ ಬಿಟ್ಟಿದೆ.ಎಲ್ಲಾ ಸುದ್ದಿಗಳನ್ನು ಸಂಕ್ಷಿಪ್ತವಾಗಿ ತಿಳಿದುಕೊಂಡು ನಂತರ ಎಲ್ಲಾ ತಿಳಿದಿರುವಂತೆ ಮಾತನಾಡಿಕೊಂಡು ತಿರುಗಾಡುವವರನ್ನು ನೋಡಿದಾಗ , ಗೂಡಂಗಡಿಗಳಲ್ಲಿ ನೇತಾಡಿಕೊಂಡಿರುವ ಹಾಗು ಮನೆಯ ಧೂಳನ್ನು ಮನಸಾರೆ ಸ್ವೀಕರಿಸಿರುವ ದಿನಪತ್ರಿಕೆಗಳು ಏನಂದುಕೊಂಡಿರಬಹುದು ಎಂಬ ಕುತೂಹಲ ಕಾಡುತ್ತಿರುತ್ತದೆ‌. ದಿನಪತ್ರಿಕೆ ಹಾಲಿನ ಪ್ಯಾಕೆಟ್ ಜೊತೆ ಮನೆಯಂಗಳದಲ್ಲಿ ಮುಂಜಾನೆ ಕಾಣದಿದ್ದರೆ ಏನೋ ಸಂಕಟ. ಮನೆತುಂಬಾ ಓಡಾಡುತ್ತಾ ಪೇಪರ್ ನವನನ್ನು ಶಪಿಸುತ್ತಾ ತಿರುಗಾಡುವುದು. ಐದು ನಿಮಿಷಗಳಿಗೊಮ್ಮೆ ಬಾಗಿಲಿನ ಬಳಿಗೆ ತೆರಳಿ ಇಣುಕುವುದು. ಮಜವಾದ ವಿಚಾರವೆಂದರೆ , ಪೇಪರ್ ಬಂದ ಮೇಲೆ ..ಕೇವಲ ಪುಟಗಳನ್ನು ತಿರುಗಿಸಿ ಒಂದೆರಡು ಮುಖ್ಯಾಂಶಗಳನ್ನು ಓದಿ ನಂತರ ಅದನ್ನು ಮರೆತುಬಿಡುವುದು. ಒಟ್ಟಿನಲ್ಲಿ ಅದು ಕಣ್ಣೆದುರು ಇರಬೇಕಷ್ಟೇ. ಅದನ್ನು ಓದುವ ಅಭ್ಯಾಸ ಮಾಯವಾಗಿರುವ ಮನೆಯ ಪುಟ್ಟ ರೇಡಿಯೋದೊಂದಿಗೆ ಮರೆಯಾಗಿದೆ. ಒಂದು ವೇಳೆ ವಿಶೇಷ ಮನಸ್ಸಿನೊಂದಿಗೆ ಶುಭ ದಿನದಂದು ಪೇಪರ್ ತೆರೆದು ಓದಲಾರಂಭಿಸಿದರೂ , ಕೇವಲ ಹೆಡ್ ಲೈನ್ಸ್ ಗಳನಷ್ಟೇ ಓದುವ ತಾಳ್ಮೆ ಉಳಿದಿದೆ ಎಂಬ ವಿಚಾರ ದುರದೃಷ್ಟಕರವಾದದ್ದು. ಏನೋ ಚಡಪಡಿಕೆ. ಏನೋ ಆತುರತೆ . ಬೇಗ ಓದಿ ಮುಗಿಸಿ ಯಾವುದೋ ದೊಡ್ಡ ಕಾರ್ಯವನ್ನು ಮಾಡಲು ತೆರಳುವ ಅವಸರ.

ದಿನನಿತ್ಯದ ಸಂಭಾಷನೆಗಳಲ್ಲಿ , ಟಿ.ವಿ ವೀಕ್ಷಿಸುವಾಗ ..ಕೇಳುವ ಕೆಲವು ಪದಗಳ ಪರಿಚಯವೇ ಇಲ್ಲದೆ ತಬ್ಬಿಬ್ಬಾಗಿ ಒಂದು ರೀತಿಯಲ್ಲಿ ಮುಖಭಂಗ ಅನುಭವಿಸುವ ಪರಿಸ್ಥಿತಿ ಅದೇಕೆ ಎದುರಾಗಿರಬಹುದು ?! ಎಲ್ಲೋ ಒಮ್ಮೆ ಕೇಳಿದ ನೆನಪಿದೆ ‌. ಅಲ್ಪಸ್ವಲ್ಪ ಅರಿವೂ ಇದೆ. ಆದರೆ ಪದದ ಅರ್ಥ ತಿಳಿದಿಲ್ಲ ಎಂದು ಹೇಳಿಕೊಳ್ಳುವಾಗ ಅನುಭವಿಸುವ ಮುಜುಗರಕ್ಕೆ ಕಾರಣ ?! ಎಲ್ಲಾ ಪ್ರಶ್ನೆಗಳಿಗೂ ಉತ್ತರ ನಮ್ಮ ಮನೆಯ ಮೂಲೆಯೊಂದರಲ್ಲಿ ಧೂಳಿನಿಂದ ತುಂಬಿರುವ ದಿನಪತ್ರಿಕೆಗಳಲ್ಲಿ ದೊರೆಯುತ್ತದೆ. ನಾವೇ ಆಹ್ವಾನಿಸಿ , ಕೂರಲು ಒಂದು ಸ್ಥಳವನ್ನೂ ತೋರಿಸಿ ..ಮಾತನಾಡಿಸದೆ ಬೀಳ್ಕೊಡುವ ಅತಿಥಿಯೇ ದಿನಪತ್ರಿಕೆ. ಬದುಕಿನ ಎಲ್ಲಾ ವಿಚಾರಗಳನ್ನು ತಿಳಿದುಕೊಂಡಿರುವ ಪುಸ್ತಕಗಳನ್ನು ಭೇಟಿಯಾಗಿ ಸಂದರ್ಶಿಸುವಷ್ಟು ಸಮಯವಿಲ್ಲದ , ಮಾಲ್ ಗಳಲ್ಲಿ ಬಟ್ಟೆಗಳನ್ನು ಖರೀದಿಸಿ ಪುಸ್ತಕಗಳನ್ನು ಖರೀದಿಸಲು ಹಣವಿಲ್ಲದ , ಮಹತ್ತರವಾದ ಕಾರ್ಯಗಳಲ್ಲಿ ಮಗ್ನರಾಗಿರುವವರು ..ತಮ್ಮ ಮನೆಯ ಸಹೃದಯಿ ನಿವಾಸಿಯೊಂದಿಗೆ ಒಂದಷ್ಟು ಸಮಯ ಕಳೆದರೆ ಭಾಷೆ ಶುದ್ಧವಾಗಿ ಉಳಿಯಬಹುದು ಎಂಬ ನಂಬಿಕೆ ಇನ್ನೂ ಜೀವಂತವಾಗಿದೆ.

ನಗಲು ನೆನಪಿಸುವವರು

ಯಾವುದೇ ಸಮಾರಂಭಕ್ಕೆ ಹೋದರೂ , ನಾನು ತಪ್ಪದೆ ಗಮನಿಸುವವರೆಂದರೆ , ತಮ್ಮ ಆನಂದದ ಕ್ಷಣಗಳನ್ನು ನೆನಪಿನಲ್ಲೇ ಸಂಗ್ರಹಿಸುತ್ತಾ ಅಲೆದಾಡುವ ಫೋಟೋಗ್ರಾಫರ್ ಗಳು. ಎಲ್ಲರ ಬೇಡಿಕೆಗಳನ್ನು ಪೂರೈಸುತ್ತಾ , ಇತರರ ನಗುವಿಗೆ ಸಾಕ್ಷಿಯಾಗುವ ವಿಶೇಷ ವ್ಯಕ್ತಿಗಳು ಅವರು. ಅವರ ಕೌಶಲ್ಯವನ್ನು ಕಡೆಗಣಿಸಿ , ಅವರಿಗೆ ತಮ್ಮದೇ ವಿಚಿತ್ರ ಸೂಚನೆಗಳನ್ನು ನೀಡುವ ಹಲವರು. ಅವರ ಅಭಿಪ್ರಾಯಕ್ಕೂ ಕಾಯದೆ , ತಮಗೆ ಸಮಾಧಾನವಾಗುವವರೆಗೆ ಫೋಟೋ ತೆಗೆಸಿಕೊಳ್ಳುವ ಹಲವರು. ಇವರೆಲ್ಲರನ್ನೂ ಮೀರಿ , ಅವರು ಕಣ್ಣೆದುರು ನಿಂತಿದ್ದರೂ ತಮ್ಮದೇ ಫೋನನ್ನು ಅವಲಂಬಿಸುವ ವೀರರು. ಎದುರಿಗೆ ನಿಂತಿರುವ ವ್ಯಕ್ತಿಯ ಭಂಗಿಯನ್ನು ನೋಡಿ ನಗು ಬಂದರೂ ನಗುವಂತಿಲ್ಲ. ವಿಶೇಷ ಕ್ಷಣವೊಂದರ ಫೋಟೋದಲ್ಲಿ ಇರುವಂತಿಲ್ಲ. ಅವರ ಕೈಯಲ್ಲಿರುವ ಕ್ಯಾಮರಾ ಕೆಳಗಿಳಿದ ಕೂಡಲೆ ಅವರು ಲೆಕ್ಕಕ್ಕಿಲ್ಲ. ಫೋಟೋ ತೆಗೆಸಿಕೊಳ್ಳುವಾಗ , ಅವರು ಹಲವು ಸೂಚನೆಗಳನ್ನು ನೀಡಿದರೂ ಅವರನ್ನು ಕಿರಿಕಿರಿ ನೀಡಿದರೆಂದು ದೂರುತ್ತೇವೆ. ಅವರ ಸಲಹೆಗಳನ್ನು ಕಡೆಗಣಿಸಿ ,ಆಮೇಲೆ ಆ ಫೋಟೋ ಚೆನ್ನಾಗಿ ಬರಲ್ಲಿಲ್ಲವೆಂದರೂ ಅವರನ್ನೇ ದೂರುತ್ತೇವೆ. ಕ್ಷೇಮವೇ ಎಂದು ಕೇಳುವ ಬದಲು ಫೋಟೋ ಯಾವಾಗ ಕೊಡುತ್ತೀರಿ ಎಂದು ಕೇಳಿದರೂ ಸಹನೆ ತೋರಿ ಉತ್ತರಿಸುವವರು ಅವರು. ಅವರು ಶ್ರಮಪಟ್ಟು ಹಸ್ತಾಂತರಿಸುವ ಫೋಟೋಗೆ ಹಿಂದೆಮುಂದೆ ಯೋಚಿಸದೆ ಕೆಲವು ಬದಲಾವಣೆಗಳನ್ನು ಮಾಡಿ ಅಪ್ ಲೋಡ್ ಮಾಡುವುದೇ ಒಂದು ರೀತಿಯಲ್ಲಿ ನಮ್ಮ ಕಡೆಯಿಂದ ಅವರಿಗೆ ಸಲ್ಲುವ ನಮನ.

ಒಬ್ಬ ಫೋಟೋಗ್ರಾಫರ್ ತನ್ನ ಕ್ಯಾಮರಾವನ್ನು ಕಣ್ಣಿಗೆ ಪರಿಚಯಿಸಿ , ಮನಸ್ಸಿನ ಅಭಿಪ್ರಾಯವನ್ನು ಆಧರಿಸಿ ಬಟನ್ ಒತ್ತಿದಾಗ ಸೆರೆಯಾಗುವುದು ಕೇವಲ ಒಂದು ಚಿತ್ರವಲ್ಲ. ಆತನ ಅನೇಕ ದಿನಗಳ ಕನಸು ನನಸಾದ ಕ್ಷಣ ಅದಾಗಿರಬಹುದು. ಮುಂದೆ ನಡೆಯಲಿರುವ ನೂರಾರು ವಿಚಾರಗಳ ಆರಂಭ ಅದಾಗಿರಬಹುದು. ಆತನ ಕಲ್ಪನೆಗೆ ಆತನ ಕ್ಯಾಮರಾ ನೀಡಿದ ಉತ್ತರವೇ ಅಲ್ಲಿ ಸೆರೆಯಾಗಿರುತ್ತದೆ. ಹೀಗೆ ತೆಗೆದಿದ್ದರೆ ಚೆನ್ನಾಗಿರುತ್ತಿತ್ತು ಎಂದು ದೂರುವ ಮುನ್ನ , ಆ ಕ್ಯಾಮರಾ ನಮ್ಮ ಕೈಯಲ್ಲಿದ್ದಿದ್ದರೆ ಸೆರೆಯಾಗುತ್ತಿದ್ದ ಚಿತ್ರವನ್ನೊಮ್ಮೆ ಕಲ್ಪಿಸಿಕೊಳ್ಳಬೇಕು. ಅನೇಕ ಲೆಕ್ಕಾಚಾರಗಳು , ದ್ವೇಷಗಳೇ ಸುಳಿದಾಡುತ್ತಿರುವ ಕಾಲದಲ್ಲಿ , ಶುದ್ದವಾದ ಮನಸ್ಸಿನಿಂದ ನಮ್ಮ ನಗೆಯನ್ನು ಬಯಸುವವರು ಫೋಟೋಗ್ರಾಫರ್ ಗಳು. ಅನೇಕ ಆಲೋಚನೆಗಳು ಓಡಾಡುತ್ತಿರುವಾಗ , ನಗಲು ನೆನಪಿಸುವವರು ಅವರು. ಗುಂಪಿನಲ್ಲಿ ಫೋಟೋಗಾಗಿ ನಿಂತು , ನಾನು ಸರಿಯಾಗಿ ಕಾಣುತ್ತಿದ್ದೇನೋ ಇಲ್ಲವೋ ಎಂದು ಆಲೋಚಿಸುವ ನಾವು , ಅಲ್ಲೊಂದು ಜೀವ ಮಾಡುತ್ತಿರುವ ತ್ಯಾಗವನ್ನು ಮರೆತು ಬಿಟ್ಟಿದ್ದೇವೆ ಅಲ್ಲವೆ?

ಮುನ್ನಾರ್ !

ಯಾವುದಾದರೊಂದು ಹೊಸ ಜಾಗಕ್ಕೆ ಭೇಟಿ ನೀಡದೆ ಅಥವಾ ಯಾವುದಾದರೊಂದು ಹೊಸ ಬಗೆಯ ರುಚಿ ಸೇವಿಸದೆ ಕಳೆದ ವಾರಾಂತ್ಯಗಳು ನನಗೆ ಒಗ್ಗರಣೆ ಇಲ್ಲದ ಅಡುಗೆಯಂತೆ ಭಾಸವಾಗಿ ಕಾಡುತ್ತವೆ.ಈ ವಾರಾಂತ್ಯದಲ್ಲಿ ಏನು ಮಾಡಲಿ ಎಂದು ಯೋಚಿಸುತ್ತಾ ಕುಳಿತ್ತಿದ್ದೆ. ಅಷ್ಟರಲ್ಲಿ ಗೆಳೆಯನೋರ್ವ ತನ್ನ ಗೆಳೆಯರೊಂದಿಗೆ ತಾನು ಮುನ್ನಾರ್ ಗೆ ತೆರಳುತ್ತಿರುವುದರ ಬಗ್ಗೆ ತಿಳಿಸಿ , ನನ್ನನ್ನೂ ಆಮಂತ್ರಿಸಿದ. ಹೆಚ್ಚೇನು ಯೋಚಿಸದೆ ಒಪ್ಪಿದೆ. ಆದರೆ ಆಗ , ಅದು ನನ್ನ ಜೀವನದ ಅತ್ಯದ್ಭುತವಾದ ಅನುಭವಗಳಲ್ಲಿ ಒಂದಾಗಲಿದೆ ಎಂಬುದರ ಅರಿವಿರಲಿಲ್ಲ. ಹಾಗಾಗಿ ,ಈ ಲೇಖನದ ನಿಜವಾದ ರೂವಾರಿ ಆ ನನ್ನ ಗೆಳೆಯನೇ. ಅಂದು ರಾತ್ರಿ ತುರ್ತಿನಲ್ಲಿ ಅಗತ್ಯವಿದ್ದ ವಸ್ತುಗಳನ್ನು ಬ್ಯಾಗ್ ನಲ್ಲಿ ತುಂಬಿಸಿ ಹೊರಟುಬಿಟ್ಟೆ. ಆ ಗುಂಪಿನಲ್ಲಿ ನಾನೇ ಕಿರಿಯವನು. ಒಂದು ಮುದ್ದಾದ ಪುಟ್ಟ ಟೆಂಪೋ ನಮ್ಮನ್ನು ಅಲ್ಲಿಗೆ ಕರೆದೊಯ್ಯಲು ಸಿದ್ಧವಾಗಿ ನಿಂತಿತ್ತು. ವಿಂಡೋ ಸೀಟ್ ನಲ್ಲಿ ಕುಳಿತು ಓಡಾಡುತ್ತಿದ್ದ ವಾಹನಗಳ ಹಾರ್ನ್ ಹಾಗು ಧೂಳಿನ ನಡುವೆ , ನಾಳಿನ ಮುನ್ನಾರ್ ಬಗ್ಗೆ ಆಲೋಚಿಸತೊಡಗಿದೆ. ಅದರ ಬಗ್ಗೆ ಕೇಳಿದ್ದ , ಓದಿದ್ದ ಹಾಗು ಅಂತರ್ಜಾಲದಲ್ಲಿ ನೋಡಿದ್ದ ಅಷ್ಟೂ ವಿಚಾರಗಳು ಸೇರಿಕೊಂಡು ಒಂದು ರೀತಿಯ ಕಲ್ಪನೆ ಮೂಡಲಾರಂಭಿಸಿತ್ತು. ಅಲ್ಲಿಗೆ ಅದಾಗಲೇ ಹಲವಾರು ಬಾರಿ ತೆರಳಿದ್ದ ನಮ್ಮ ಡ್ರೈವರ್ ಮಾತ್ರ ನಮ್ಮೆಲ್ಲರ ಮಾತುಕತೆ ಹಾಗು ಚರ್ಚೆಗಳ ನಡುವೆ ತನ್ನ ಪಾಡಿಗೆ ತಾನು ಗೇರ್ ಬದಲಿಸುತ್ತಾ , ವಾಹನ ಚಲಾಯಿಸುತ್ತಿದ್ದ. ನಿದ್ರೆಗೆ ಜಾರಿದ ಸಮಯ ನೆನಪಿಲ್ಲ. ಮರುದಿನ ಎದ್ದಾಗ ಒಂದು ರೋಚಕ ದೃಶ್ಯ ಕಂಡಿತು. ನಾವು ಸಾಗುತ್ತಿದ್ದ ರಸ್ತೆಯ ಎರಡೂ ಬದಿಯಲ್ಲಿ ದಟ್ಟವಾದ ಮಂಜು ಕವಿದಿತ್ತು. ತನ್ನ ಎಲ್ಲಾ ಅನುಭವಗಳನ್ನು ಬಳಸಿ ಡ್ರೈವರ್ ಎದುರಿನಿಂದ ಬರುತ್ತಿದ್ದ ವಾಹನಗಳನ್ನು ನಿಭಾಯಿಸಿಕೊಂಡು ವಾಹನ ಚಲಾಯಿಸುತ್ತಿದ್ದ. ಇದೇ ಮುನ್ನಾರ್ ಇರಬೇಕು ಎಂದು ನನ್ನ ಸಂಭ್ರಮಿಸುವ ಮುನ್ನವೇ , ಪಕ್ಕದಲ್ಲಿ ನನಗಿಂತ ಮೊದಲೇ ಎದಿದ್ದ ನನ್ನ ಗೆಳೆಯ ನಾವು ತಲುಪಲು ಇನ್ನೂ ಬಹಳ ಸಮಯವಿದೆ ಎಂದು ತಿಳಿಸಿಬಿಟ್ಟ. ಇಲ್ಲೇ ಹೀಗಿರಬೇಕಾದರೆ , ಇನ್ನು ಅಲ್ಲಿ ಹೇಗಿರಬಹುದು ಎಂದು ಆಲೋಚಿಸುತ್ತಾ ನಾನು ಮಂಜಿನ ನಡುವೆ ಏನಾದರು ಕಾಣುತ್ತಿದೆಯೇ ಎಂದು ಅವಲೋಕಿಸುತ್ತಾ ಕುಳಿತೆ.

ಇದ್ದ ಉತ್ಸಾಹವೆಲ್ಲಾ ಮರೆಯಾಗಿ ಇನ್ನೇನು ಮತ್ತೆ ನಿದ್ರೆಗೆ ಜಾರುವುದರಲ್ಲಿದ್ದೆ. ಅಷ್ಟರಲ್ಲಿ ಡ್ರೈವರ್ , ” ನೋಡಿ ಟೀ ಎಸ್ಟೇಟ್ ” ಎಂದು ಹೇಳಿ ಹೊಸ ಉತ್ಸಾಹಕ್ಕೆ ಚಾಲನೆ ನೀಡಿಬಿಟ್ಟ. ತುಂಬಾ ದೂರದವರೆಗೆ ಹಚ್ಚ ಹಸಿರಿನ ಟೀ ಗಿಡಗಳು. ಅವುಗಳನ್ನು ನೋಡಿದಾಗಲೇ ಟೀ ಕುಡಿದಷ್ಟು ಆನಂದವಾಗುತ್ತಿತ್ತು. ಅದರ ಜೊತೆಗೆ ಬೃಹದಾಕಾರದ ಬೆಟ್ಟಗಳು. ತಂಪಾದ ಗಾಳಿ. ಕಿರಿದಾದ ದಾರಿ . ಅದರಲ್ಲಿ ಸಾಗುತ್ತಿದ್ದ ನಮ್ಮ ಪುಟ್ಟ ಟೆಂಪೋ.ನಮ್ಮ ವಾಹನದ ಮೇಲೆ ಏನೋ ಹಗುರವಾದ ತುಂಡುಗಳು ನಿರಂತರವಾಗಿ ಬೀಳುತ್ತಾ ಸದ್ದು ಮಾಡುತ್ತಿದ್ದವು. ನಾನಂತೂ ಆ ಸುಂದರವಾದ ಅನುಭವದಲ್ಲಿ ಕಳೆದುಹೋಗಿ , ಅವು ಆ ತಂಪಾದ ವಾತಾವರಣದಲ್ಲಿ ಸೃಷ್ಟಿಯಾಗಿ ಬೀಳುತ್ತಿದ್ದ ಪುಟ್ಟ ಪುಟ್ಟ ಹಿಮಗಡ್ಡೆಗಳು ಎಂದೇ ನಿರ್ಧರಿಸಿಬಿಟ್ಟಿದ್ದೆ. ನನ್ನ ಗೆಳೆಯ ಅವು ಇಳಿಜಾರಿನ ಪ್ರದೇಶದಲ್ಲಿ ಬೆಳೆದಿದ್ದ ಟೀ ಗಿಡಗಳ ಬುಡದಿಂದ ಉದುರಿ ಬೀಳುತ್ತಿದ್ದ ಮಣ್ಣಿನ ಪುಟ್ಟ ಉಂಡೆಗಳು ಎಂದು ತಿಳಿಸಿದಾಗಲೇ ನನಗೆ ಅರಿವಾಗಿದ್ದು. ನಾವು ವಾಸ್ತವ್ಯ ಹೂಡಲಿದ್ದ ಮನೆಯನ್ನು ನಾವೇ ಹುಡುಕಿಕೊಂಡು ಹೋಗಲಾರದೆ , ಕೊನೆಗೆ ಆ ಮನೆಯ ಮಾಲೀಕರೇ ಬಂದು ದಾರಿ ತೋರಿಸಬೇಕಾಯಿತು. ಇದಕ್ಕೆ ಕಾರಣವೂ ಇತ್ತು. ಆ ಪ್ರದೇಶದಲ್ಲಿ ಎಲ್ಲಾ ದಾರಿಗಳೂ ತುಂಬಾ ಕಿರಿದಾಗಿದ್ದವು. ಒಂದಕ್ಕೊಂದು ಅಪ್ಪಿಕೊಂಡ ನೂರಾರು ಮನೆಗಳು. ಅವೆಲ್ಲದರ ನಡುವೆ ಪವಾಡದ ರೀತಿಯಲ್ಲಿ ಇಳಿಜಾರಿನ ರಸ್ತೆಗಳಲ್ಲೂ ಮನೆಗಳ ಎದುರು ನಿಲ್ಲಿಸಿದ್ದ ವಾಹನಗಳು. ಹೆಚ್ಚುಕಮ್ಮಿ ಒಂದೇ ರೀತಿ ಕಾಣುತ್ತಿದ್ದ ಹಲವಾರು ದಾರಿಗಳ ಹಾಗು ಮನೆಗಳ ನಡುವೆ ನಮ್ಮ ಮನೆಯನ್ನು ಹುಡುಕುವುದು ಅಸಾಧ್ಯವೇ ಎಂದು ಅನಿಸಿತ್ತು ನನಗೆ. ಅಲ್ಲಿನ ವಿಚಿತ್ರತೆ ಎಂದರೆ , ಸುಡುಬಿಸಿಲಿದ್ದರೂ ತಂಪಾದ ಗಾಳಿ ಬೀಸುತ್ತಿರುತ್ತದೆ. ಒಂದೇ ಸಮಯದಲ್ಲಿ ಬಿಸಿ ಹಾಗು ಚಳಿಯನ್ನು ಅನುಭವಿಸಲು ಸಾಧ್ಯವಾಗುವ ಅದ್ಭುತ ಸ್ಥಳವೇ ಮುನ್ನಾರ್. ಸುಧಾರಿಸಿಕೊಂಡ ಬಳಿಕ ,‌ನಾವು ಮೊದಲು ನೋಡಲು ಹೊರಟದ್ದು , ಅಲ್ಲೇ ಹತ್ತಿರದಲ್ಲಿದ್ದ ಜಲಪಾತವನ್ನು . ಅಲ್ಲಿಗೆ ತೆರಳಲು ಇಳಿಜಾರಿನ‌ ಕಿರಿದಾದ ರಸ್ತೆಯಲ್ಲಿ ಸಾಗಬೇಕಿತ್ತು. ಆಟೋದಲ್ಲಿ ತೆರಳುತ್ತಿರಬೇಕಾದರೆ , ಅಲ್ಲಿನ ಭಾಷೆ ತಿಳಿದಿದ್ದ ನನ್ನ ಗೆಳೆಯ ಚಾಲಕನೊಂದಿಗೆ ಅಲ್ಲಿನ ವಿಶೇಷತೆಗಳನ್ನು ವಿಚಾರಿಸುತ್ತಿದ್ದ. ನಾನು ಅಲ್ಲಿಂದಲೇ ಕಾಣುತ್ತಿದ್ದ ಜಲಪಾತವನ್ನು ಇಣುಕಿ ನೋಡುತ್ತಿದ್ದ. ಯಾವ ತಕರಾರು ಇಲ್ಲದೆ ತನ್ನ ಪಾಡಿಗೆ ತಾನು ಹಾಯಾಗಿ ಹರಿಯುತ್ತಿದ್ದ ಆ ಜಲಪಾತವನ್ನು ಕಂಡು ಆನಂದವಾಯಿತು. ನಂತರ , ಮನಸೆಳೆದದ್ದು ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಬೆಟ್ಟವೊಂದರ ಮೇಲಿನಿಂದ ಕಂಡ ಸೂರ್ಯಾಸ್ತ. ಕಲ್ಲು ಬಂಡೆಯ ಮೇಲೆ ಕುಳಿತು , ತಂಪಾಗಿ ಬೀಸುತ್ತಿದ್ದ ಗಾಳಿಯನ್ನು ಆನಂದಿಸುತ್ತಾ ಕಣ್ಣ ಮುಂದೆ ಮೂಡಿದ್ದ ಸುಂದರವಾದ ಚಿತ್ತಾರವನ್ನು ಮನಸಾರೆ ಒಪ್ಪಿಕೊಂಡು ಈ ಸೂರ್ಯಾಸ್ತವಾಗದೆ ಹೀಗೇ ಇರಲಿ ಎಂದು ಪ್ರಾರ್ಥಿಸಿದ ಕ್ಷಣವದು. ನಂತರ ತೆರಳಿದ್ದು ಮುನ್ನಾರ್ ಪೇಟೆಯನ್ನು ಸುತ್ತಲು. ಅಲ್ಲಿ ಸವಿಯಲು ಸಿಕ್ಕ ವಿಶೇಷ ತಿನಿಸುಗಳ ರುಚಿ ಈಗಲೂ ಕಾಡುತ್ತಿದೆ. ಮುನ್ನಾರ್ ನನಗೆ ಇಷ್ಟವಾಗಲು ಅಲ್ಲಿನ ಪೇಟೆಯೂ ಒಂದು ಕಾರಣ. ಪುಟ್ಟದಾದರೂ ಬಹಳ ಸರಳವಾದ ಹಾಗು ಮುದ್ದಾದ ಪೇಟೆಯದು. ಹೆಚ್ಚೇನು ಸದ್ದಿಲ್ಲ. ಗಲಾಟೆ ತಕರಾರುಗಳಿಲ್ಲ. ಪ್ರವಾಸಿಗರನ್ನು ಬಹಳ ವಿನಯದಿಂದ ಸ್ವಾಗತಿಸುವ ವ್ಯಾಪಾರಿಗಳು. ರಾತ್ರಿ ಬಹಳ ಬೇಗನೇ ಹೆಚ್ಚಿನ ಅಂಗಡಿಗಳು ಮುಚ್ಚಿಬಿಡುತ್ತವೆ.ಸೂರ್ಯಾಸ್ತವಾದ ಕೆಲವೇ ಗಂಟೆಗಳಲ್ಲಿ ಚಳಿ ವಿಪರೀತಗೊಳ್ಳುತ್ತದೆ.

ಮರುದಿನ ಬೇಗನೇ ಎದ್ದು ಅಲ್ಲಿನ ಮಂಜನ್ನು ಗಮನಿಸಲು ನಿರ್ಧರಿಸಿದ್ದರೂ , ಎದ್ದಾಗ ಅದಾಗಲೇ ತಡವಾಗಿತ್ತು. ಆ ಮನೆಯ ಮಾಲೀಕರೊಂದಿಗೆ ಬೈಕಿನಲ್ಲಿ ಕುಳಿತು ತಿಂಡಿ ಖರೀದಿಸಲು ಹೊರಟೆ. ಆಗಲೇ ನನಗೆ ಮುನ್ನಾರ್ ನಲ್ಲಿ ಕನ್ನಡ ಕಿವಿಗೆ ಬಿದ್ದದ್ದು. ಅಲ್ಲಿಗೆ ಬರುತ್ತಿದ್ದ ಪ್ರವಾಸಿಗರೊಂದಿಗೆ ಮಾತನಾಡಿಯೇ ಅವರು ಕನ್ನಡವನ್ನೂ ಕಲಿತುಬಿಟ್ಟಿದ್ದರು. ಅವರಿಂದ ತಿಳಿದ ಇನ್ನೊಂದು ವಿಚಾರವೆಂದರೆ , ಮುನ್ನಾರ್ ನಲ್ಲಿ ಸುಮಾರು ನೂರಕ್ಕೂ ಹೆಚ್ಚಿನ ಬಗೆಯ ಟೀ ಪುಡಿಗಳು ದೊರೆಯುತ್ತವೆಯಂತೆ. ಅಂದು ಅಲ್ಲಿನ ವಿಶೇಷವಾದ ಟೀ ಅಂಗಡಿಗೆ ಹಾಗು ಮನಸೆಳೆಯುವ ನೂರಾರು ಬಗೆಯ ಹೂವಿನ ಪ್ರದರ್ಶನವಿದ್ದ ಸ್ಥಳಗಳಿಗೆ ಭೇಟಿ ನೀಡಿದೆವು. ಅದರ ಜೊತೆಗೆ ನನಗೆ ಬಹಳ ಆನಂದ ನೀಡಿದ್ದು , ತೆಪ್ಪದಲ್ಲಿ ವಿಹಾರಿಸಿದ ಕ್ಷಣಗಳು. ನಾನು ತೆಪ್ಪದಲ್ಲಿ ವಿಹಾರಿಸಿದ್ದು ಅದೇ ಮೊದಲ ಬಾರಿಗೆ. ಎಲ್ಲಾ ಆಲೋಚನೆಗಳನ್ನು ಮರೆಸಿ ಮುದನೀಡುವ ಸುಂದರವಾದ ಅನುಭವವದು. ಅದನ್ನು ನಿರ್ವಾಹಿಸಿದವನ ದಿನಚರಿ ಹಾಗು ಸರಳತೆ , ಎಲ್ಲವನ್ನೂ ಮೀರಿದ ಭಾವುಕತೆಯನ್ನು ಹಾಗು ಬದುಕಿನ ಸೌಂದರ್ಯವನ್ನು ನೆನಪಿಸಿತು. ಈ ಇಡೀ ಮುನ್ನಾರ್ ಪಯಣದ್ದುದ್ದಕ್ಕೂ , ಅದಾಗಲೇ ಹಲವು ಬಾರಿ ನೋಡಿದ್ದರೂ ನಮಗಾಗಿ ಉತ್ಸಾಹದಿಂದ ಅನೇಕ ಸ್ಥಳಗಳನ್ನು ಪರಿಚಯಿಸಿದ ಹಾಗು ಕುತೂಹಲಕಾರಿ ವಿಚಾರಗಳನ್ನು ತಿಳಿಸಿದ ನಮ್ಮ ಡ್ರೈವರ್ ಹಾಗು ಅಲ್ಲಿನ ನಿವಾಸಿಗಳನ್ನು ಎಂದಿಗೂ ಮರೆಯಲಾರೆ. ಒಟ್ಟಿನಲ್ಲಿ ಸರಳತೆಯನ್ನು ಸಾರುವ , ಹಿತವಾದ ಸೌಹಾರ್ದತೆಯ ತಂಗಾಳಿ ಬೀಸುವ , ಬದುಕಿನ ಸೌಂದರ್ಯವನ್ನು ನೆನಪಿಸುವ , ಆನಂದದ ತವರೇ ಮುನ್ನಾರ್.

ಬಲ್ಬ್ ಬೆಳಕಿನಲ್ಲಿ ಚಹಾ ಕುಡಿಯುತ್ತಾ ಹೂವಿನ ಬಗ್ಗೆ ಚರ್ಚೆ

ಅಂದು ಮುಂಜಾನೆ ಬಹಳ ಬೇಗನೆ ಎದ್ದು ಒಂದು ವಿಶೇಷ ಸ್ಥಳದ ಕಡೆಗೆ ಹೊರಟಿದ್ದೆ. ಅದೆಷ್ಟೋ ಮಾರುಕಟ್ಟೆಗಳನ್ನು ನೋಡಿದ್ದರೂ , ಈ ಮಾರುಕಟ್ಟೆಯನ್ನು ನೋಡುವ ಕುತೂಹಲ ಹೆಚ್ಚಾಗುತ್ತಿತ್ತು. ಅಂದಹಾಗೆ ನಾನು ಅಲ್ಲಿಗೆ ಹೋಗುತ್ತಿದ್ದದ್ದು , ಯಾವ ಖರೀದಿಗೂ ಅಲ್ಲ.ಕೇವಲ ಅಲ್ಲಿನ ದೃಶ್ಯಗಳನ್ನು ಕಂಡು ಆನಂದಿಸುವುದಕ್ಕೆ . ಅನೇಕ ಕನಸುಗಳು ಓಡಾಡಿಕೊಂಡಿರುವ ಊರಿನಲ್ಲಿ , ಹಲವಾರು ಕನಸುಗಳನ್ನು ನನಸಾಗಿಸುವ , ಶ್ರಮದ ಫಲಿತಾಂಶವನ್ನು ಸೂರ್ಯ ಬೆಳಗುವ ಮುನ್ನವೆ ಪ್ರಕಟಿಸುವ ನೂರಾರು ಲೆಕ್ಕಾಚಾರಗಳ ತವರಾಗಿದೆ ಕೆ.ಆರ್ ಫ್ಲವರ್ ಮಾರ್ಕೆಟ್. ಆ ಸ್ಥಳದ ಬಗ್ಗೆ ನಿಮಗೆ ಮೊದಲೆ ಒಂದಿಷ್ಟು ವಿಚಾರಗಳು ತಿಳಿದಿದ್ದು , ಮೊದಲ ಬಾರಿಗೆ ಅಲ್ಲಿಗೆ ಹೋದಾಗ , ಒಂದಿಷ್ಟು ಗೊಂದಲವಾಗುವುದು ಖಚಿತ. ಕೆ.ಆರ್ ಫ್ಲವರ್ ಮಾರ್ಕೆಟ್ ನ ಅಕ್ಕಪಕ್ಕದಲ್ಲೂ ಅನೇಕ ಜನರು ತಮ್ಮ ವ್ಯಾಪಾರವನ್ನು ನಡೆಸುತ್ತಾ ಕುಳಿತಿರುತ್ತಾರೆ. ಯಾವ ಭೇದಭಾವವಿಲ್ಲದೆ , ಕೇವಲ ಶ್ರಮವನ್ನು ಗೌರವಿಸುವ ಸ್ಥಳವದು. ನನ್ನ ಗೊಂದಲವನ್ನು ದೂರ ಮಾಡಿದ್ದು ಅಲ್ಲೇ ಪಕ್ಕದಲ್ಲಿ ಹಣ್ಣುಗಳನ್ನು ತಳ್ಳು ಗಾಡಿಯಲ್ಲಿ ಮಾರುತ್ತಿದ್ದ ವ್ಯಕ್ತಿ. ಕೆ.ಆರ್. ಮಾರ್ಕೆಟ್ ನಾನು ನಿಂತಿರುವ ಸ್ಥಳವೇ ಎಂದೂ , ಹೂವುಗಳನ್ನು ಮಾರುವ ಸ್ಥಳ ಅಲ್ಲಿ ಕಾಣುತ್ತಿರುವ ದೊಡ್ಡ ಕಟ್ಟಡವೆಂದೂ ಹೇಳಿದ. ಅದನ್ನು ಹೇಳುವಾಗ , ಆ ಮಾರ್ಕೆಟ್ ನಲ್ಲಿ ಕುಳಿತುಕೊಳ್ಳುವ ವ್ಯಾಪಾರಿಗಳ ಮೇಲೆ ಇದ್ದ ಪ್ರೀತಿ ಹಾಗು ಗೌರವ , ಎರಡೂ ಆತನ ಮುಖದಲ್ಲಿ ಕಾಣುತ್ತಿತ್ತು. ಹೊರ ದೇಶದಿಂದ ಬಂದ ವ್ಯಕ್ತಿಗೆ ,‌ತನ್ನ ದೇಶದ ಅತ್ಯಂತ ಅದ್ಭುತ ಸ್ಮಾರಕವನ್ನು ತೋರಿಸುವ ಹಾಗೆ , ಆತ ನನಗೆ ಹೂವು ಮಾರಾಟವಾಗುವ ಕಟ್ಟಡವನ್ನು ತೋರಿಸಿದ. ಆ‌ ಸ್ಥಳದ ಅದ್ಭುತ ವಿಚಾರವೆಂದರೆ , ಅದಾಗಲೆ ಅಲ್ಲಿ ಸುಮಾರು ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿರುವವರಿಗೆ , ಹೊಸಬರನ್ನು ನೋಡಿದಾಗ , ಮಾತನಾಡದೆ ಬರಿ ಮುಖದಲ್ಲೇ ಸ್ವಾಗತ ಎಂದು ಕೋರುವ ಉಲ್ಲಾಸವಿದೆ. ಅದೆಷ್ಟೆ ಜನರು ತುಂಬಿದ್ದರೂ , ಯಾರ ತಂಟೆಗೂ ಇನ್ನೊಬ್ಬರು ಹೋಗದೆ , ತಮ್ಮ ವ್ಯಾಪಾರವನ್ನು ಮಾಡಿಕೊಂಡಿರುವ ಅಪರೂಪದ ಸ್ಥಳವದು. ಮೌನದಲ್ಲೇ ಒಂದು ಗೌರವವಿದೆ , ದಿನಚರಿಯಲ್ಲಿ ಅನುಭವದ ನಗುವಿದೆ. ಸುಮಾರು ಬೆಳಗಿನ ಜಾವ ಮೂರು ಗಂಟೆಗೆ ಅಲ್ಲಿನ ವ್ಯಾಪಾರ ಪ್ರಾರಂಭವಾಗುತ್ತದೆ. ಅಲ್ಲಿ ದೊರಕುವ ತಾಜಾತನ ತುಂಬಿದ ಹಣ್ಣು ಹಾಗು ಹೂವುಗಳು , ಇನ್ನೊಂದೆಡೆ ದೊರಕುವುದು ಅನುಮಾನ. ಹಲವರು ಬಲ್ಬ್ ನೇತಾಡಿಸಿಕೊಂಡು , ಚಹಾ ಕುಡಿಯುತ್ತಾ ವ್ಯಾಪಾರ ನಡೆಸುತ್ತಿರುತ್ತಾರೆ. ಸೂರ್ಯ ಉದಯಿಸುವಷ್ಟರಲ್ಲೇ ವ್ಯಾಪಾರ ಮುಗಿದು ಹೋಗಿ ಹಿಂದೆ ತೆರಳುವವರೂ ಇರುತ್ತಾರೆ. ತಮ್ಮ ಶ್ರಮದ ಪಕ್ಕದಲ್ಲಿ ಕುಳಿತು ಫಲಿತಾಂಶವನ್ನು ಲೆಕ್ಕಹಾಕುತ್ತಿರುವವರೂ ಕಾಣಸಿಗುತ್ತಾರೆ. ನಾಳೆಯ ವ್ಯಾಪಾರದ ಚಿಂತೆಯೂ ಕೆಲವರ ಮುಖದಲ್ಲಿ ಕಾಣಸಿಗುತ್ತದೆ. ಒಟ್ಟಿನಲ್ಲಿ ಒಂದು ಬಗೆಯ ಹೋರಾಟವನ್ನು ನಡೆಸುತ್ತಾ , ನಗುಮುಖವನ್ನು ಹೊತ್ತು ಅದರ ಹಿಂದೆ ನಾಳೆಯ ಚಿಂತೆಯನ್ನು ಸಂತೈಸುತ್ತಿರುವ ವ್ಯಾಪಾರಿಗಳು ಇರುವ ಸ್ಥಳವೇ ಕೆ.ಆರ್. ಫ್ಲವರ್ ಮಾರ್ಕೆಟ್ . ಅದೇನೆ ಆದರೂ , ಮುಂದಿನ ವ್ಯಾಪಾರದ ಬಗ್ಗೆ ಚಿಂತಿಸುವ ಅವರ ಮನೋಭಾವ ಗೊತ್ತಿಲ್ಲದೆ ಸದ್ದಿಲ್ಲದೆ ಬದುಕಿನ ಅದ್ಭುತ ಪಾಠವೊಂದನ್ನು ಎಲ್ಲರಿಗೂ ತಿಳಿಸುತ್ತದೆ.

ನಾಳೆಯಿಂದ ಖಂಡಿತ!

ಇರುವ ನೂರಾರು ವಿಚಾರಗಳನ್ನೆಲ್ಲಾ ಮರೆತು , ಏನಾದರೂ ಹೊಸತನ್ನು ಹುಡುಕಾಡುವ ಮನಸ್ಥಿತಿ ನನಗೆ ಬಹಳ ಕುತೂಹಲಕಾರಿಯಾದದ್ದು ಎಂದನಿಸುತ್ತದೆ. ಅನುಸರಿಸುತ್ತಿರುವ ಹಾಗು ಮಾಡುತ್ತಿರುವ ಕೆಲಸಗಳಿಂದ ಅನುಭವಿಸುತ್ತಿರುವ ಕೆಟ್ಟ ಪರಿಣಾಮಗಳ ಅರಿವಿದ್ದರೂ ಅದನ್ನೇ ಮುಂದುವರಿಸಿಕೊಂಡು ಹೋಗುವ ದಿನಚರಿ ಇನ್ನೊಂದೆಡೆ. ಈ ಎರಡೂ ವಿಚಾರಗಳು ಪರಿಹಾರದ ನೆಪದಲ್ಲಿ ಒಂದಾಗುವ ದಾರಿಗಳು. ಆದರೆ ಈ ಒಂದಾದ ದಾರಿಯಲ್ಲಿ ಸಾಗುವ ಮುಹೂರ್ತ ಮಾತ್ರ , ನಾವೇ ಕರೆದು ಅದು ಬಂದಾಗ ಆಮೇಲೆ ಬರಲು ಹೇಳುವ ಮುಂಜಾನೆಯ ಅಲಾರ್ಮ್ ನಂತೆ. ಏನೇನೋ ಉನ್ನತವಾದ ವಿಚಾರಗಳನ್ನೆಲ್ಲಾ ಆಲೋಚಿಸಿ ಕ್ರಾಂತಿಕಾರಿಯಾಗಲಿರುವ ನಾಳೆಯನ್ನು ಸ್ಮರಿಸಿಕೊಂಡು ನಿದ್ರೆಗೆ ಜಾರುವ ಆ ಧೀರ ನಡೆ. ಮುಂಜಾನೆ ಅವೆಲ್ಲವನ್ನೂ ಮರೆತು ಅದೇ ದಿನಚರಿಗೆ ಶರಣಾಗಿ ಓಡಾಡುವ ಸನ್ನಿವೇಶಗಳು.ಕೆಲವೊಮ್ಮೆ ಹಿಂದಿನ ದಿನ ನಿರ್ಧರಿಸಿದ ವಿಚಾರಗಳನ್ನು ನೆನಪಿಸಿಕೊಂಡು , ಅದು ನಿಜವೋ ಅಥವಾ ಕನಸೋ ಎಂದು ಅವಲೋಕಿಸುತ್ತಾ ಕುಳಿತುಕೊಳ್ಳುವ ಮಜವಾದ ಸಂದರ್ಭಗಳು. ಖಂಡಿತವಾಗಿಯೂ ಸಾಧ್ಯವಾಗುವುದಿಲ್ಲ ಎಂದು ತಿಳಿದಿದ್ದರೂ , ನಿತ್ಯವೂ ಕೈಗೊಳ್ಳುವ ಹೊಸ ನಿರ್ಧಾರಗಳು. ತಪ್ಪಿನ ಅರಿವಿದ್ದರೂ ಏನೂ ಆಗದಂತೆ ನಗುವ ಮುಗ್ಧತೆ ಬೇರೆ.

ಕೇವಲ ನಿರ್ಧಾರದ ಮಟ್ಟದಲ್ಲೇ ಉಳಿದುಹೋಗಿ ನಮ್ಮ ಕರೆಯನ್ನು ನಿರೀಕ್ಷಿಸುತ್ತಿರುವ ಅದೆಷ್ಟೋ ಹೊಸ ವಿಚಾರಗಳನ್ನು ಒಮ್ಮೆ ಸಂದರ್ಶಿಸಬೇಕು. ಆ ವಿಚಾರವನ್ನು ನಾವು ನಿರ್ಧರಿಸಲು ಕಾರಣವೇನಾಗಿರಬಹುದು ?! ಇತರರನ್ನು ಗಮನಿಸಿ ತೆಗೆದುಕೊಂಡ ನಿರ್ಧಾರವೇ ?! ಯಾರೋ ಒಳ್ಳೆಯದು ಎಂದು ಹೇಳಿದ್ದರಿಂದ ನಾವೂ ತಲೆಯಾಡಿಸಿ ಒಪ್ಪಿಕೊಂಡ ನಿರ್ಧಾರವೇ ?! ಅಥವಾ ನಿಜವಾಗಿಯೂ ನಮಗೆ ಅಗತ್ಯವಿರುವ ಹಾಗು ಉಪಯುಕ್ತವಾದ ನಿರ್ಧಾರವೇ ?! ಉಯ್ಯಾಲೆಯಂತೆ ಇರುವ ನಮ್ಮ ಮನಸ್ಸನ್ನು ಈ ಕುರಿತು ಕೇಳುವುದು ಸ್ವಲ್ಪ ಕಷ್ಟವೇ. ಏಕೆಂದರೆ ಸುಮ್ಮನಿದ್ದರೂ ನಾವೇ ಹೋಗಿ ದೂಡುವ ಉಯ್ಯಾಲೆ ಅದು. ಬೇಕು ಬೇಡಗಳನ್ನು ಅರಿತು , ಉಪಯುಕ್ತವಾದ ಸುಗಂಧ ತುಂಬಿದ ಹೂವು ಕಾಣಸಿಗುವುದು ವಿವೇಕದ ನೀರನ್ನು ಹೀರುವ ಗಿಡಗಳಿರುವ ಉದ್ಯಾನದಲ್ಲಿ. ಇನ್ನು ಮುಂದೆ ಯಾವುದಾದರೊಂದು ಹೊಸ ನಿರ್ಧಾರವನ್ನು ಕೈಗೊಳ್ಳುವ ಮುನ್ನ , ಈ ಉದ್ಯಾನವನ್ನೊಮ್ಮೆ ಸುತ್ತಿ ಬರೋಣ. ಆ ಹೂವು ಅಲ್ಲಿ ದೊರೆತರೆ , ಅದರ ಮನತಣಿಸುವ ಸೌಂದರ್ಯವನ್ನು ಹಾಗು ಸುಗಂಧದ ಅನಂದವನ್ನು ಅನುಭವಿಸದೆ ಪಕ್ಕಕ್ಕಿಡುವ ತಪ್ಪು ನಾವು ಮಾಡದಿರಬಹುದು. ಮಾಡಿದರೂ ಅದು ಬಾಡಿದಾಗ , ಪಶ್ಚಾತಾಪವಾಗಿ ಮುಂದೆ ಆ ತಪ್ಪು ಮಾಡಲಾರೆವು. ಏನಂತೀರಿ ?

ಮೌನದ ಊರಿನಲ್ಲೊಂದು ಮನೆಯ ಮಾಡಿ…

ಅನೇಕ ದಿನಗಳ ಒದ್ದಾಟದ ನಂತರ , ಕೊನೆಗೂ ಹಲ್ಲಿನ ನೋವಿನಿಂದ ಮುಕ್ತಿ ಸಿಗಲಿದೆ ಎಂಬ ಉತ್ಸಾಹದೊಂದಿಗೆ ಅಂದು ಮನೆಯಿಂದ ಹೊರಟಿದ್ದೆ. ಹಿಂದಿನ ದಿನ ಎಷ್ಟು ಪ್ರಯತ್ನಿಸಿದರೂ ನಿದ್ರಿಸಲಾಗದೆ , ಈ ವಿಚಾರದ ಕುರಿತೇ ವಿಚಿತ್ರ ಆಲೋಚನೆಗಳು ಮನಸ್ಸಿನ ತುಂಬಾ ಓಡಾಡುತ್ತಿದ್ದವು. ಬೇರೆ ಆಸ್ಪತ್ರೆಗಳಿಗೆ ಹೋಲಿಸಿದರೆ , ನನಗೆ ಹಲ್ಲಿನ ಆಸ್ಪತ್ರೆಗಳು ವಿಭಿನ್ನವಾಗಿ ಕಾಣುತ್ತವೆ. ಅಲ್ಲೊಂದು ಭಯಾನಕವಾದರೂ ಬಹಳ ವಿಶೇಷವಾದ ಸುಗಂಧವಿರುತ್ತದೆ ಎಂಬುದು ನನ್ನ ನಂಬಿಕೆ. ಬಸ್ಸಿನಲ್ಲಿ ತೆರಳುತ್ತಿದ್ದಾಗ , ಟಿಕೆಟ್ ವಿಚಾರದಲ್ಲಿ ಕಂಡಕ್ಟರ್ ನೊಂದಿಗೆ ಮಾತನಾಡಿದಾಗ , ಸ್ವಲ್ಪ ನಡುಕ ಹುಟ್ಟಿತು. ಈಗ ಇಷ್ಟು ಸಲೀಸಾಗಿ , ಮಾತನಾಡುತ್ತಿರುವ ನಾನು..ಮುಂದಿನ ಒಂದು ವಾರದವರೆಗೆ ಮಾತನಾಡಲಾಗದ ಸ್ಥಿತಿ ತಲುಪಿಬಿಡುತ್ತೇನೆ ! ಅದು ಇನ್ನು ಕೆಲವೇ ಗಂಟೆಗಳಲ್ಲಿ! ಪ್ರಯಾಣಿಸುವಾಗ ನನಗೆ ಇಷ್ಟವಾಗುವ ವಿಚಾರವೆಂದರೆ ಜನರನ್ನು ಗಮನಿಸಲು ಸಿಗುವ ಅವಕಾಶ.ಅಂದೂ ಅದೇ ಮಾಡಿದೆ. ಆದರೆ ಅಲ್ಲಿ ಇಲ್ಲಿ ಕೇಳಿಸುತ್ತಿದ್ದ ಮಾತುಗಳು ಬಹಳ ಅಮೂಲ್ಯವಾಗಿಯೇ ನನ್ನ ಕಿವಿ ತಲುಪುತ್ತಿದ್ದವು.

ಅದೆಷ್ಟೇ ಲೆಕ್ಕಾಚಾರಗಳನ್ನು ಹಾಕಿಕೊಂಡರೂ , ಮುಂದೆ ನಡೆಯುವ ವಿಚಾರಗಳು ಬೇರೆಯೇ ಆಗಿರುತ್ತದೆ ಎಂಬುದನ್ನು ಇನ್ನೊಮ್ಮೆ ಆಸ್ಪತ್ರೆಯ ಸನ್ನಿವೇಶಗಳು ನೆನಪಿಸಿದವು. ನಿಧಾನವಾಗಿ ನೋವು ಹೆಚ್ಚಾಗುತ್ತಿತ್ತು. ಮುಂದಿನ ಒಂದು ವಾರವು ಬಹಳ ಭಯಾನಕವಾಗಿರಲಿದೆ ಎಂಬ ಸೂಚನೆ ಅದಾಗಲೇ ದೊರಕಿತ್ತು. ಕೆಲವು ಗಂಟೆಗಳ ಹಿಂದೆ ನಿಮ್ಮೊಂದಿಗೆ ಹರಟೆ ಹೊಡೆದ್ದಿದ್ದ ವ್ಯಕ್ತಿ , ಈಗ ನೀವು ಹೇಳಲು ಯತ್ನಿಸುತ್ತಿರುವ ಒಂದು ಪದವನ್ನು ತಿಳಿಯಲು ಒದ್ದಾಡುತ್ತಿದ್ದಾನೆ. ಯಾವುದೋ ಒಂದು ವಿಚಾರದ ಬಗ್ಗೆ ಗಂಟೆ ಗಟ್ಟಲೆ ವಾದ ಮಾಡಿದ್ದ ನೀವು ಈಗ ಬೇರೊಂದು ವಿಚಾರಕ್ಕೆ ಕೇವಲ ಸಮ್ಮತಿ ಸೂಚಿಸಲೂ ಪರದಾಡುತ್ತಿದ್ದೀರಿ. ಮುಖವನ್ನೂ ನೋಡದೆ ಮಾತನಾಡಿ ತೆರಳಿ ಬಿಡುತ್ತಿದ್ದ ನೀವು , ಈಗ ಪ್ರತಿಯೊಬ್ಬರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಪ್ರಯತ್ನಿಸಬಹುದಷ್ಟೇ. ಹಿಂದೆ ಮುಂದೆ ನೋಡದೆ ಸೇವಿಸುತ್ತಿದ್ದ ಆಹಾರವನ್ನು ಈಗ ಪ್ರಾರ್ಥಿಸಿ , ಪೂಜಿಸಿ , ನಂಬಿ ಸೇವಿಸಬೇಕು. ಯದ್ವಾ ತದ್ವಾ ಹಲ್ಲುಜ್ಜುತ್ತಿದ್ದ ನೀವು , ಈಗ ಆಮೆಯನ್ನು ಹೊಗಳುತ್ತಾ ಹಲ್ಲುಜ್ಜಬೇಕು. ಇದೆಲ್ಲವನ್ನೂ ಗಮನಿಸಿದಾಗ …ಬದುಕಿನಲ್ಲಿ ಅದೆಷ್ಟು ವಿಚಾರಗಳನ್ನು ನಾವು ಲೆಕ್ಕಿಸದೆ , ಬೆಲೆ ನೀಡದೆ , ಕಡೆಗಣಿಸಿ ಬಿಟ್ಟಿದ್ದೇವೆ ಎಂಬ ವಿಚಾರ ಅತಿಯಾಗಿ ಕಾಡುತ್ತದೆ. ನಿತ್ಯವೂ ನಮ್ಮ ಬಳಿ ಇಲ್ಲದ ವಸ್ತುಗಳನ್ನು , ದೂರ ಸರಿದಿರುವ ವ್ಯಕ್ತಿಗಳನ್ನು , ನಮಗಿರದ ಸೌಭಾಗ್ಯಗಳನ್ನು ನೆನೆದು ಕೊರಗುತ್ತೇವೆ ಹೊರತು .. ನಮ್ಮೊಂದಿಗಿರುವ ಆನಂದದ ಪರಿಚಯ ನಮಗಿರುವುದೇ ?! ಇದ್ದರೂ ಅದಕ್ಕೆ ಸರಿಯಾದ ಗೌರವವನ್ನು ಸಲ್ಲಿಸುತ್ತಿದ್ದೇವೆಯೇ ?! ಇವೆಲ್ಲದ್ದಕ್ಕಿಂತಲೂ ಮಿಗಿಲಾದ ವಿಚಾರವೊಂದು ಆ ಒಂದು ವಾರದಲ್ಲಿ ನನ್ನ ಅನುಭವಕ್ಕೆ ಬಂತು. ಅದುವೇ , ಮನಸ್ಸಿನ ಎಲ್ಲಾ ಅಭಿಪ್ರಾಯಗಳ ಪರವಾಗಿ ಎದುರಿನ ವ್ಯಕ್ತಿಯನ್ನು ಭೇಟಿಯಾಗಲು ತೆರಳುವ ನಮ್ಮ ಮಾತು. ಅದು ಒಂದು ವೇಳೆ ತಲುಪದೆ ಹೋದರೆ , ಮನಸ್ಸಿನೊಳಗಿರುವ ಅಭಿಪ್ರಾಯಗಳ ಒದ್ದಾಟ. ಒಂದು ವೇಳೆ ತಲುಪಿದರೂ , ಆ ವ್ಯಕ್ತಿಗೆ ಅದು ಅರ್ಧವಾಗದೆ ಹೋದರೆ ಈ ನಿರಪರಾಧಿಗಳಾದ ಅಭಿಪ್ರಾಯಗಳಿಗೆ ತಟ್ಟುವ ಅಪಕೀರ್ತಿ. ಹಿಂದೆ ಮುಂದೆ ನೋಡದೆ ಮಾತನಾಡುವ ಮುನ್ನ , ಆ ಮಾತುಗಳ ಜವಾಬ್ದಾರಿಯನ್ನೊಮ್ಮೆ ಆಲೋಚಿಸಿ ನೋಡಿ. ಗಲಾಟೆಗಳಿಂದ ದೂರ ಸರಿದು , ಮೌನದ ಊರಿನಲ್ಲೊಮ್ಮೆ ವಾಸಿಸಿ ನೋಡಿ. ಅಲ್ಲೊಂದು ಸುಂದರವಾದ ನೆಮ್ಮದಿಯಿದೆ. ಅಲ್ಲಿ ಅರಳುವ ಹೂವುಗಳಲ್ಲಿ ಅನುಬಂಧದ ಸುಗಂಧವಿದೆ. ಅಲ್ಲಿ ಬೆಳಗುವ ದೀಪದಲ್ಲಿ , ಅರಿವಿನ ಪ್ರಕಾಶವಿದೆ.

ಏಳನೆ ಮಹಡಿಯ ಹೂವು

ಬಹಳ ದಿನಗಳ ನಂತರ ಮನೆಗೆ ಹಿಂದಿರುಗಿ ಬಂದಾಗ ಆಗುವ ಅನುಭವ ಬಹಳ ವಿಶೇಷವಾದದ್ದು. ಬೇರೆ ಯಾವುದೇ ಊರಿಗೆ ಹಾಗೋ ಹೀಗೋ ಒಂದೆರಡು ಒಳ್ಳೆಯ ವಿಚಾರಗಳನ್ನು ಹುಡುಕಿಕೊಂಡು ಹೊಂದಿಕೊಂಡಿದ್ದರೂ , ತವರೂರಿಗೆ ಬಂದಾಗ ಅವೆಲ್ಲವೂ ಮರೆತುಹೋಗಿಬಿಡುತ್ತದೆ. ಮರಳುಗಾಡಿನಲ್ಲಿದ್ದವನಿಗೆ ಸಮುದ್ರ ಕಂಡಾಗ ಆಗುವ ಆನಂದದಂತಿರುತ್ತದೆ ಆ ಕ್ಷಣ. ಅಪರಿಚಿತರೂ ನಮ್ಮವರು ಎಂದು ಸ್ವೀಕರಿಸುವ ಸುಂದರ ಮನಸ್ಥಿತಿ ಇರುತ್ತದೆ. ಬಸ್ ಇಳಿದು ಮನೆಯವರೆಗೆ ರಿಕ್ಷಾದಲ್ಲಿ ತೆರಳುವಾಗ , ಆತ ಊರಿನಲ್ಲಿ ಇತ್ತೀಚಿಗೆ ನಡೆದ ಯಾವುದಾದರೂ ಬದಲಾವಣೆಗಳಿದ್ದರೆ , ಅದನ್ನು ಮಾತನಾಡದೆ ನಮಗೆ ಸೂಚಿಸುವ ರೀತಿ ಎಲ್ಲವನ್ನೂ ಮೀರಿ ಆನಂದ ನೀಡುವಂತದ್ದು. ಊರಿನ ಬೀದಿಗಳಲ್ಲಿ ತೆರಳುವಾಗ , ಇದು ನಮ್ಮ ಊರು ಎಂಬ ಹೆಮ್ಮೆ ನಮ್ಮಿಬ್ಬರ ಮನಸ್ಸಿನಲ್ಲೂ ಅಲೆದಾಡುತ್ತಿರುತ್ತದೆ.ಕೆಲವೊಮ್ಮೆ ಆತ ಊರಿನ ಕೆಲವು ವಿಚಾರಗಳ ಬಗ್ಗೆ ತನ್ನ ಅಭಿಪ್ರಾಯವನ್ನು ತಿಳಿಸಿ , ನಾನು ನನ್ನ ಅಭಿಪ್ರಾಯ ತಿಳಿಸುವ ಮೊದಲೆ ಇನ್ನೊಂದು ವಿಚಾರ ಪ್ರಸ್ತಾಪಿಸಿಬಿಡುವ ಪ್ರಸಂಗಗಳು ಬಹಳ ಮಜವಾದದ್ದು. ನಿತ್ಯವೂ ಹೆಚ್ಚು ಕಮ್ಮಿ ಇಡೀ ಊರನ್ನು ತಿರುಗಾಡುವ ಅವರು , ಗಮನಿಸಿದ ಅದೆಷ್ಟೊ ವಿಚಾರಗಳನ್ನು ಇನ್ಯಾರ ಬಳಿ ಹೇಳಿಕೊಳ್ಳಬೇಕು. ತಾತ್ಕಾಲಿಕ ಬಂಧುವಾದರೂ ಅಲ್ಲೊಂದು ಬಾಂಧವ್ಯವಿದೆ.

ಮನೆ ತಲುಪಿದಾಗ , ನನ್ನ ಮನೆಯವರು ಪಡುವ ಆನಂದದಷ್ಟೇ ಆನಂದಪಟ್ಟು ನಗುವ ವಾಚ್ ಮ್ಯಾನ್ ನ ಮುಖ ಎಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನ ಬದುಕಿನ ಅನೇಕ ಹಂತಗಳನ್ನು ಅದೇ ಸ್ಥಳದಲ್ಲಿ ನಿಂತು ಗಮನಿಸಿರುವ ಅವರ ಅನುಭವ ತುಂಬಿದ ಸ್ವಾಗತ ಹಾಗು ಪ್ರೀತಿ ಬಹಳ ಅಮೂಲ್ಯವಾದದ್ದು. ಎಲ್ಲಾ ಮಾತುಕತೆಗಳ ನಂತರ ಕೆಲವು ಕ್ಷಣಗಳ ಕಾಲ ಮನೆಯ ಒಂದು ಭಾಗದಲ್ಲಿ ಒಬ್ಬನೇ ಕೂತಾಗಲೆಲ್ಲಾ ನನ್ನನ್ನು ಸೆಳೆಯುವುದು , ಏಳನೆ ಮಹಡಿಯ ನಮ್ಮ ಮನೆಯ ಎರಡೂ ಬಾಲ್ಕನಿಗಳಲ್ಲಿ ನನ್ನ ಅಮ್ಮ ಪ್ರೀತಿಯಿಂದ ಬೆಳೆಸಿರುವ ಹೂದೋಟ. ಅಲ್ಲಿರುವ ಅಷ್ಟೂ ಗಿಡಗಳಲ್ಲಿ ನಿತ್ಯವೂ ಯಾವುದಾದರೊಂದು ಗಿಡದಲ್ಲಿ ಹೂವು ಖಂಡಿತವಾಗಿಯೂ ಅರಳುತ್ತದೆ. ನಿನ್ನೆ ಯಾವು ಹೂವು ಅರಳಿತ್ತು , ನಾಳೆ ಯಾವ ಹೂವು ಅರಳಲಿದೆ ಎಂದು ಬಹಳ ಉತ್ಸಾಹದಿಂದ ಆಕೆ ವಿವರಿಸುವ ರೀತಿ ಕಂಡಾಗಲೆಲ್ಲಾ , ಎಲ್ಲವನ್ನೂ ದೂರುತ್ತಾ , ನೆಪವನ್ನು ನೀಡುತ್ತಾ ಬದುಕುವ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಎಂದನಿಸುತ್ತದೆ. ಅಲ್ಲೇನು ಹೆಚ್ಚು ಸ್ಥಳವಿಲ್ಲ. ಭೂಮಿಯಲ್ಲಿ ದೊರಕುವಷ್ಟು ಸಹಾಯವೂ ಈ ಎತ್ತರದಲ್ಲಿರುವ ಗಿಡಗಳಿಗೆ ದೊರಕುವುದಿಲ್ಲ. ಅಮ್ಮನಿಗೆ ಹಲವಾರು ವರ್ಷಗಳ ಹಿಂದೆ , ಹಳೆಮನೆಯ ಸುತ್ತಲೂ ಇದ್ದ ದೊಡ್ಡ ಸ್ಥಳದ ತುಂಬೆಲ್ಲಾ ಗಿಡಗಳನ್ನು ಬೆಳೆಸಿದ ಅನುಭವ ಹಾಗು ಸಿಹಿನೆನಪಿದೆ. ಆದರೂ ಇಂದು ಇರುವಷ್ಟು ಸ್ಥಳದಲ್ಲಿ ಅಷ್ಟೇ ಪ್ರೀತಿಯಿಂದ ಗಿಡಗಳನ್ನು ಬೆಳೆಸುತ್ತಾ .. ಆಚೆ ಈಚೆ ಓಡಾಡುವಾಗ ಅರಳಿರುವ ಹೂವುಗಳನ್ನು ನೋಡಿ ಆನಂದಿಸುತ್ತಾಳೆ. ಯಾವ ಕುರ್ಚಿಯ ಮೇಲೆ ಕುಳಿತರೂ ಸಿಗದಷ್ಟು ಆನಂದ ಆ ಗಿಡಗಳ ನಡುವೆ ಕುಳಿತಾಗ ಸಿಗುತ್ತದೆ. ಆ ಗಿಡಗಳ ನಡುವಿನಲ್ಲಿರುವ ಪುಟ್ಟ ಜಾಗದಲ್ಲಿ ಕುಳಿತು ದೂರದಲ್ಲಿ ಕಾಣುತ್ತಿರುವ ಸಾಗರವನ್ನು ನೋಡುತ್ತಾ ..ತಂಗಾಳಿಯ ಕಚಗುಳಿಗೆ ನಾಚಿ ನಗುವ ಹೂವುಗಳನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ನನಗಿದೆ . ಬೇರೆ ಊರಿನ ಧೂಳು ಹಾಗು ಟ್ರಾಫಿಕ್ ಅನ್ನು ಮರೆಸಿ ಮನಸ್ಸಿಗೆ ಆನಂದ ನೀಡಿ , ನನ್ನ ಊರಿನ ಅಂದವನ್ನು ಸಾರುವ ಆ ಹೂವೇ ನನ್ನ ನೆಮ್ಮದಿ ಮತ್ತು ನಗುವಿನ ರೂವಾರಿ ಹಾಗು ಆಗಾಗ ನನ್ನ ಕವಿತೆಗಳಲ್ಲಿ ಕಾಣ ಸಿಗುವ ವಿಶೇಷ ಅತಿಥಿ.

ಅಮ್ಮ ಎಂದು ಕರೆದು ..

ಮನೆಯಿಂದ ದೂರದಲ್ಲೆಲ್ಲೊ ಕಾರಣಾಂತರಗಳಿಂದ ವಾಸಿಸುವಾಗ , ಅನೇಕ ತಪ್ಪು ಕಲ್ಪನೆಗಳ ಅರಿವಾಗುತ್ತದೆ. ಇಲ್ಲಿಂದ ದೂರ ಹೋಗಿ ಎಲ್ಲಾದರೂ ಒಬ್ಬನೇ ಆರಾಮವಾಗಿ ಇರಬಹುದು , ಎಲ್ಲಾ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನನಗೀಗ ಇದೆ. ಹೀಗೆಂದು ಮನೆಯಲ್ಲಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತಿರುವಾಗ ಆಲೋಚಿಸಿದ್ದು ಮತ್ತೆ ಮತ್ತೆ ನೆನಪಾಗುತ್ತದೆ. ಮನೆಯವರ ಪ್ರಶ್ನೆಗಳು , ಅದರ ಹಿಂದಿದ್ದ ನಮ್ಮ ಮೇಲಿನ ಕಾಳಜಿ , ಕಿರಿಕಿರಿ ಎಂದನಿಸುತ್ತಿದ್ದ ಸಲಹೆಗಳು ..ಈಗ ಕೈ ಹಿಡಿದು ರಕ್ಷಿಸುತ್ತಿರುವ ರೀತಿಯನ್ನು ಮೂಕನಾಗಿ ಗಮನಿಸುತ್ತಾ , ಎಂದೂ ವ್ಯಕ್ತಪಡಿಸದ ಕೃತಜ್ಞತೆಯೊಂದಿಗೆ ರಾತ್ರಿ ಮಲಗುವ ದಿನಚರಿ. ಇದೊಂದು ರೀತಿಯಲ್ಲಿ , ಊರ ಹಬ್ಬವೆಲ್ಲಾ ಮುಗಿದ ಮರುದಿನ ಆವರಿಸುವ ಮೌನದಂತೆ. ಅದೇ ಜಾಗವಾದರೂ , ಇಂದು ಯಾವುದೇ ಸಡಗರದ ಶಬ್ಧವಿಲ್ಲ. ರಂಗುರಂಗಾಗಿ ಕಂಗೊಳಿಸುತ್ತಿದ್ದ ಊರು ಇಂದು ಬಿಕೋ ಎನ್ನುತ್ತಿದೆ. ಇಂತಹ ಸಂಭ್ರಮವಿಲ್ಲದ , ಗಲಾಟೆಗಳ ನಡುವೆಯೂ ದೊರೆಯುತ್ತಿದ್ದ ಆನಂದವು ಮರೆಯಾಗಿರುವ ಊರಿನ ಸ್ಥಿತಿ ತಲುಪಿರುತ್ತದೆ ಮನಸ್ಸು. ಇಲ್ಲಿರುವ ಅನೇಕ ಸವಾಲುಗಳ ನಡುವೆ ವಿರಾಜಿಸುವ ಸಮಸ್ಯೆ ಎಂದರೆ ಊಟ ತಿಂಡಿ ಎಂಬ ಹಿಂದೆ ಕಡೆಗಣಿಸಲ್ಪಟ್ಟಿದ್ದ ವಿಚಾರ. ಯಾವುದೋ ವೀಡಿಯೋ ನೋಡಿಕೊಂಡು ಊಟ ತಯಾರಿಸುವ ಸಾಹಸ ಒಂದೆರಡು ವಾರಗಳಲ್ಲೇ ನಿಂತು ಬಿಟ್ಟ ನಂತರ ಮೊರೆಹೋಗಲೇ ಬೇಕಾದದ್ದು ಮನೆಬಾಗಿಲಿಗೆ ಬಂದು ಊಟ ತಲುಪಿಸುವ ಫುಡ್ ಡೆಲಿವರಿಯ ಸೌಲಭ್ಯದೆಡೆಗೆ. ಅದರಲ್ಲೂ ನೂರೆಂಟು ಆಯ್ಕೆಗಳು . ಅದನ್ನು ನಿರ್ಧರಿಸುವಷ್ಟರಲ್ಲಿ , ಹಸಿವೇ ಸ್ವತಹ ಇರಲಿ ಬಿಡು ನಾನೇ ಹೊರಡುತ್ತೇನೆ ಎಂದು ತೆರಳಿಬಿಡುವ ವಿಚಿತ್ರ ಸನ್ನಿವೇಶಗಳು. ಊಟ ತಂದು ನೀಡುವಾತನೊಂದಿಗೆ ಹಂಚಿಕೊಳ್ಳುವ ತಾತ್ಕಾಲಿಕವಾದ ಸಂಬಂಧ. ಆತ ಕರೆಮಾಡಿ ವಿಳಾಸ ಕೇಳುವಾಗ , ನಮ್ಮ ಮದುವೆಗೆ ಬರಲಿರುವ ಬಂಧುವಿಗೆ ತಿಳಿಸುವಂತಹ ರೀತಿಯಲ್ಲಿ ನಾವು ವಿಳಾಸ ತಿಳಿಸುವ ಆ ಉತ್ಸಾಹ. ನಮ್ಮ ಮನೆಗೆ ಬರಲಿರುವ ಸಂಬಂಧಿಕರಿಗೂ ಕಾಯದಷ್ಟು ಕಾತುರತೆಯೊಂದಿಗೆ ಆತನಿಗಾಗಿ ಕಾಯುವ ನಮ್ಮ ಪರಿಸ್ಥಿತಿ. ಆತ ಕೊನೆಗೂ ಬಂದಾಗ ಪರಸ್ಪರ ನೋಡಿಕೊಂಡು ಹಂಚಿಕೊಳ್ಳುವ ಅರ್ಧ ನಗು. ಆಮೇಲೆ ಆತನನ್ನು ಸಂಪೂರ್ಣವಾಗಿ ಮರೆತು , ಊಟದೆಡೆಗೆ ತೆರಳುವ ನಮ್ಮ ಗಮನ. ಇಷ್ಟವಾದರೂ ಆಗದಿದ್ದರೂ , ನೀಡುವ ರೇಟಿಂಗ್ ಹಾಗು ಫೀಡ್ ಬ್ಯಾಕ್ . ಗೆಳೆಯರಿಗೆ ಈ ಕುರಿತು ನೀಡುವ ಸಲಹೆಗಳು. ಆ ಹೊಟೇಲನ್ನು ಹೊಗಳಿ ಕೊಂಡಾಡುವ ನಮ್ಮ ಪದಗಳು. ಇವೆಲ್ಲದರ ನಡುವೆ ಆಲೋಚಿಸಬೇಕಾದ ವಿಚಾರವೊಂದಿದೆ. ಅದೆಷ್ಟೋ ತನ್ನದೆ ಆದ ಸಮಸ್ಯೆಗಳನ್ನು ಬದಿಗಿರಿಸಿ ಸಮಯಕ್ಕೆ ಸರಿಯಾಗಿ ಬಂದು ಆತ ಊಟ ತಲುಪಿಸುತ್ತಾನೆ. ಕೆಲವೊಮ್ಮೆ ನಮ್ಮ ಮನೆಯ ನೆನಪನ್ನು ಮರೆಸುವಂತಹ ರೀತಿಯಲ್ಲಿ ಹಲವಾರು ಹೊಟೇಲ್ ಗಳು ಕಾರ್ಯನಿರ್ವಹಿಸುತ್ತಿವೆ. ಇವೆಲ್ಲದಕ್ಕೆ ಸೂಕ್ತವಾಗಿ ನಾವು ನಮ್ಮ ಅಭಿಪ್ರಾಯವನ್ನು ಅವರಿಗೆ ಹಾಗು ಇತರರಿಗೂ ತಿಳಿಸುತ್ತೇವೆ. ಇಷ್ಟವಾದಾಗ ಮೆಚ್ಚಿ ಹೊಗಳುತ್ತೇವೆ. ಆದರೆ , ಅದೆಷ್ಟೋ ವರ್ಷಗಳಿಂದ ಪ್ರತಿನಿತ್ಯ ಮುಂಜಾನೆ ಮನೆಯಲ್ಲಿ ಎಲ್ಲರೂ ಎದ್ದೇಳುವ ಮೊದಲು ಎದ್ದು , ಯಾವ ಪ್ರತಿಫಲವನ್ನೂ ಬಯಸದೆ ಎಲ್ಲರಿಗಾಗಿ ಅಡುಗೆ ಮಾಡಿ ಬಡಿಸುವ ನಮ್ಮ ತಾಯಿಗೆ , ನಾವದೆಷ್ಟು ಬಾರಿ ನಮಗೆ ಇಷ್ಟವಾದಾಗ ಆ ಅಭಿಪ್ರಾಯವನ್ನು ತಿಳಿಸಿದ್ದೇವೆ ?!? ತನ್ನ ನೂರೆಂಟು ಸಮಸ್ಯೆಗಳ ನಡುವೆಯೂ , ಎಲ್ಲರಿಗೂ ಹಿತವೆನಿಸುವ ರೀತಿಯಲ್ಲಿ ಅಡುಗೆ ಮಾಡುವ , ತನ್ನ ಆರೋಗ್ಯ ಕೆಟ್ಟಾಗಲೂ ಅದನ್ನು ತನ್ನೊಳಗೇ ಇರಿಸಿಕೊಂಡು ಅಡುಗೆಮನೆಯಲ್ಲಿ ಒದ್ದಾಡುವ , ಮನೆಯವರೆಲ್ಲಾ ಹೊರೆಗೆ ಹೋದರೂ ತಾನು ಮಾತ್ರ ಮನೆಯಲ್ಲೇ ತನ್ನ ಆನಂದವನ್ನು ಹುಡುಕಿಕೊಂಡು ನಮ್ಮ ಸಮಸ್ಯೆಗಳನ್ನು ಆಲಿಸುವ , ಊಟ ಚೆನ್ನಾಗಿಲ್ಲವೆಂದು ನಾವು ನೇರವಾಗಿ ಹೇಳಿದಾಗ ಆ ನೋವನ್ನು ತೋರಿಸಿಕೊಳ್ಳದ ನಮ್ಮ ತಾಯಿ ಅದೆಷ್ಟು ವರ್ಷಗಳಿಂದ ಆ ಒಂದು ತೃಪ್ತಿಗಾಗಿ ಕಾದಿರಬಹುದು ?! ಖುಷಿಯಾದಾಗ , ಆಕೆಯ ಕಣ್ಣಿನಲ್ಲಿ ಕಣ್ಣಿಟ್ಟು , ” ಅಮ್ಮ , ಊಟ ಚೆನ್ನಾಗಿದೆ ” ಎಂದು ಹೇಳುವಷ್ಟು ಸಮಯವೂ ನಮ್ಮ ಬಳಿ ಇಲ್ಲವೆ ?!? ಇದ್ದರೂ ಹೇಳದಿರುವಷ್ಟು ಕಲ್ಲು ಹೃದಯ ಏತಕೆ ?!

ಅದೇ ದಾರಿ ಅದೇ ಟೀ!

ನಮ್ಮ ಸುತ್ತಮುತ್ತಲಿನವರನ್ನು ಗಮನಿಸಲು ಸಮಯ ಸಿಗುವುದು ರಜಾ ದಿನಗಳಲ್ಲಿ ಮಾತ್ರ ಎಂಬ ವಿಚಾರವನ್ನು ಅವಲೋಕಿಸುತ್ತಾ , ಮಾಡಲು ಯಾವುದೇ ಕೆಲಸವಿಲ್ಲದಷ್ಟು ಸ್ವಾತಂತ್ರ್ಯದಿಂದ ನಿಧಾನವಾಗಿ ನಡೆದುಕೊಂಡು ಹೋಗುತ್ತಿದ್ದೆ. ಬೇರೆ ದಿನಗಳಲ್ಲಾದರೆ , ಎದುರಿಗೆ ಬರುವವರನ್ನೆಲ್ಲಾ ದಿಟ್ಟಿಸುತ್ತಾ , ಆಚೆ ಈಚೆ ಸರಿದು , ಯಾವ ವಾಹನದಿಂದಲೂ ಕೆಸರನ್ನು ಎರಚಿಸಿಕೊಳ್ಳದಂತೆ ಎಚ್ಚರ ವಹಿಸಿ , ಆಗಾಗ ಸಮಯ ಎಷ್ಟಾಯಿತೆಂದು ಗಮನಿಸುತ್ತಾ , ಬೇರೆಯವರೆಲ್ಲರಿಗಿಂತಲೂ ನಾನು ಮೊದಲು ತಲುಪಬೇಕು ಎಂದು ಅನಾವಶ್ಯಕವಾದ ಅವಸರದಿಂದ ಹೆಜ್ಜೆಯಿಡುವುದು ಮಾಮೂಲಿ. ನಿತ್ಯವೂ ಅಲೆದಾಡುವ ಅದೇ ದಾರಿ ,ವಿನ್ಯಾಸಗೊಂಡಂತೆ ಅನಿಸುತ್ತಿತ್ತು. ಎಷ್ಟೊಂದು ವಿವಿಧತೆಯಿಂದ ಕೂಡಿದ ದೃಶ್ಯಗಳು. ಅಲ್ಲಿ ಎದುರಾಗುತ್ತಿದ್ದ ಪ್ರತಿ ಮುಖದಲ್ಲೂ ಏನಾದರೊಂದು ಸುಳಿವು ಎದ್ದು ಕಾಣುತ್ತಿತ್ತು. ನಾನು ಪ್ರತಿ ಮುಂಜಾನೆ ನಡೆದುಕೊಂಡು ಹೋಗುವಾಗ , ನಾನು ಹಾದು ಹೋಗುವವರೆಗೆ ಕಾದು ನಂತರ ತನ್ನ ಅಂಗಡಿ ಎದುರು ನೀರು ಎರಚಿ ಶುಚಿಗೊಳಿಸುವ ಕೆಲಸ ಮುಂದುವರೆಸುವಾತ , ಯಾವುದೋ ಒಂದು ವ್ಯವಹಾರದಲ್ಲಿ ನಿರತನಾಗಿದ್ದ. ಆ ನೀರಿನ ಬಿಂದಿಗೆ ಅಲ್ಲೇ ಹೊರಗಿತ್ತು. ಚುಮುಚುಮು ಚಳಿಯ ಸಾಯಂಕಾಲದ ಹೊತ್ತಿನಲ್ಲಿ ಒಂದಷ್ಟು ಬಿಸಿಬಿಸಿ ತಿಂಡಿಗಳನ್ನು ಕೊಳ್ಳಲು ಅಂಗಡಿಯೊಂದರ ಎದುರಿನಲ್ಲಿ ಮುಗಿಬಿದ್ದಿದ್ದ ಜನರು. ಅವೆಲ್ಲವನ್ನೂ ಲೆಕ್ಕಿಸದೆ ತನ್ನ ಪಾಡಿಗೆ ಪತ್ರಿಕೆ ಓದ್ದುತ್ತಾ ಅಲ್ಲೇ ಪಕ್ಕದಲ್ಲಿ ಕುಳಿತ್ತಿದ್ದ ಮುದುಕ. ಮುಂಜಾನೆಯಿಂದ ವ್ಯಾಪಾರ ನಡೆಸಿ , ಇನ್ನೇನು ಎಲ್ಲಾ ಖಾಲಿಯಾಗಲಿದೆ ..ಹೊರಟುಬಿಡಬಹುದು ಎಂಬ ಆನಂದದಲ್ಲಿದ್ದ ಹಲವು ಕಣ್ಣುಗಳು. ಜನರು ಬಂದೇ ಬರುತ್ತಾರೆ ಎಂಬ ಆತ್ಮವಿಶ್ವಾಸದಿಂದ ಜಿಲೇಬಿ ತಯಾರಿಸುತ್ತಿದ್ದ ಅನುಭವಿ. ಇನ್ನೇನು ಮರೆತೆ ಎಂದು ಆಲೋಚಿಸುತ್ತಾ ತನ್ನ ಕೈಚೀಲದೊಳಗೆ ಇಣುಕಿ ನೋಡುತ್ತಿದ್ದ ಸಂಸಾರಸ್ಥ. ಆಗ ತಾನೆ ಭೇಟಿಯಾಗಿ ಸುಖದುಖಗಳನ್ನು ಹೊಟೇಲ್ ಒಂದರ ಎದುರಿನಲ್ಲಿ ನಿಂತು ಹಂಚಿಕೊಳ್ಳುತ್ತಿದ್ದ ಫುಡ್ ಡೆಲಿವರಿಯ ಕೆಲಸ ಮಾಡುವ ಅನೇಕ ಸಹೃದಯಿಗಳು. ಎಲ್ಲವನ್ನೂ ಹಾಸ್ಯದ ದೃಷ್ಟಿಯಿಂದ ಗಮನಿಸಿ ಆನಂದಿಸುತ್ತಾ ಸಾಗುತ್ತಿದ್ದ ಗೆಳೆಯರ ಗುಂಪು. ಇವರೆಲ್ಲರ ನಡುವೆ , ರಜೆ ಮುಗಿಯಿತ್ತಲ್ಲಾ ಎಂದು ಶೋಕಿಸುತ್ತಿದ್ದ ನಾನು. ಅದಾಗಲೇ ನಿಂತು ಟೀ , ಕಾಫಿ ಕುಡಿಯುತ್ತಿದ್ದ ಹಲವರ ನಡುವಿನಲ್ಲಿ ನುಸುಳಿಕೊಂಡು ಹೋಗಿ , ಒಂದು ಟೀ ಕೊಡಿ ಎಂದೆ. ಅದು ಆತ ನೀಡಿದ ಆ ದಿನದ ಎಷ್ಟನೇಯ ಟೀ ಎಂದು ಗೊತ್ತಿಲ್ಲ. ಒಟ್ಟಿನಲ್ಲಿ ಯಾವ ಭಾವವೂ ಇಲ್ಲದ ಮುಖದೊಂದಿಗೆ , ತಗೊಳಿ ಎಂದು ಇಟ್ಟುಬಿಟ್ಟ. ಹಿತವಾದ ಚಳಿಗಾಲದಲ್ಲಿ , ಬಿಸಿಬಿಸಿ ಟೀ ಕುಡಿಯುತ್ತಿರುವಾಗ , ಮಳೆ ಬಂದು ಬಿಟ್ಟರೆ ಇನ್ನೂ ಹಿತವಾಗಿರುತ್ತದೆ ಎಂದನಿಸಿತು. ಕೂಡಲೇ ಒಣಗಲು ಹಾಕಿದ್ದ ಬಟ್ಟೆಗಳು ಹಾಗು ರೂಮ್ ನಲ್ಲೇ ಬಿಟ್ಟು ಬಂದಿದ್ದ ಕೊಡೆ ಎರಡೂ ನೆನಪಾಗಿ , ಈಗಿರುವ ಹವಾಮಾನವೇ ಅದ್ಭುತವಾಗಿದೆ ಎಂದು ಸಮಾಧಾನ ಪಟ್ಟೆ. ಟೀ ಕುಡಿದು , ಹಣ ನೀಡಿ ..ರೂಮ್ ಕಡೆಗೆ ಹಿಂದಿರುಗಿ ಬರುವಾಗ ಒಂದು ವಿಚಾರ ಕಾಡತೊಡಗಿತು. ಈ ಟೀ ಅಂಗಡಿಯವನು ನಿತ್ಯವೂ ಅವನೇ ಇರುತ್ತಾನೆ. ಅದೇ ರುಚಿಯ ಟೀಯನ್ನೇ ಕೊಡುತ್ತಾನೆ. ನಾನು ಅಲೆದಾಡುವ ಈ ನಿತ್ಯದ ದಾರಿಯೂ ಬದಲಾಗುವುದಿಲ್ಲ. ಆದರೂ ಇಂದು ದೊರೆತ ಆನಂದ ನಾಳೆ ಮತ್ತೆ ಬಂದರೆ ಸಿಗದಿರಬಹುದು. ನಿತ್ಯವೂ ಕೊರಗುತ್ತಾ ಕುಳಿತರೆ ಬದುಕು ಬದಲಾಗಲಾರದು. ಸ್ವಲ್ಪ ಕಣ್ತೆರೆದು ಗಮನಿಸಿ , ಎಲ್ಲರೊಂದಿಗೂ ಬೆರೆತು , ಚಿಕ್ಕಪುಟ್ಟ ಆನಂದದ ಕ್ಷಣಗಳನ್ನು ಮನಸಾರೆ ಸ್ವೀಕರಿಸಿ , ಅದೇ ಬದುಕನ್ನು ಪ್ರೀತಿಸುವ ಅವಕಾಶ ನಮ್ಮ ಬಳಿಯೇ ಇದೆ ಅಲ್ಲವೇ ?