ಹಲವಾರು ದಿನಗಳಿಂದ ಅನೇಕ ಬಾರಿ ನಿರಾಕರಿಸಿದರೂ ಮನದ ಹೊಸ್ತಿಲಿನಲ್ಲಿ ಓಡಾಡುತ್ತಿರುವ ಒಂದು ವಿಚಾರ ಗಮನ ಸೆಳೆಯುತ್ತಲೇ ಇದೆ . ನಿತ್ಯವೂ ನೋಡುತ್ತಿದ್ದ ಹಾಗು ಮನಸಾರೆ ಎಂದೂ ಒಪ್ಪದೆ ಕಡೆಗಣಿಸಿದ್ದ ದೃಶ್ಯಗಳು ಏಕೋ ಕಾಡುತ್ತಿದೆಯಲ್ಲಾ ?! ಇಷ್ಟರವರೆಗೆ ಮೆಚ್ಚಿರಲಿಲ್ಲ. ಹೆಚ್ಚೇನು ಗಮನಿಸಿರಲಿಲ್ಲ. ಈಗ ಆಗಾಗ ನೆನಪಾಗುತ್ತಿದೆ ಎಂದಾದರೆ ಅದು ಪ್ರಭಾವ ಬೀರಿದ್ದಾದರೂ ಯಾವಾಗ ?!ನಮಗೇ ತಿಳಿಯದ ಹಾಗೆ ಸೆರೆಯಾಗುವ ವಿಚಾರಗಳು ಬಹಳ ಕುತೂಹಲಕಾರಿ. ನಿತ್ಯವೂ ಓಡಾಡುತ್ತಿದ್ದ ಆ ದಾರಿ. ಎದುರಾಗುತ್ತಿದ್ದ ಮುಖಗಳು . ಕ್ಷಣಮಾತ್ರದಲ್ಲೇ ನಡೆದುಹೋಗುತ್ತಿದ್ದ ಪುಟ್ಟ ಪುಟ್ಟ ವಿಚಾರಗಳು. ನೂರಾರು ಅಂಗಡಿಗಳಿದ್ದರೂ , ಅದೇ ಒಂದು ನೆಚ್ಚಿನ ಅಂಗಡಿಯೆಡೆಗೆ ತೆರಳುತ್ತಿದ್ದ ರೀತಿ. ಅಲ್ಲಿ ಮಾಲಿಕನೊಂದಿಗೆ ನಡೆಯುತ್ತಿದ್ದ ನಿರ್ಜೀವ ಸಂಭಾಷಣೆ. ಅನೇಕ ಬಾರಿ ಕೆಲವು ವಿಚಾರಗಳನ್ನು ಮೆಚ್ಚಿದ್ದರೂ ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಓಡಾಡುತ್ತಿದ್ದ ದಿನಚರಿ. ಅನೇಕ ಅಸಮಾಧಾನಗಳೂ ಇದ್ದವು. ನಿತ್ಯವೂ ನೂತನ ವಿಚಾರದೆಡೆಗೆ ಸಾಗುತ್ತಿದ್ದ ಆಲೋಚನೆಗಳು. ನೆಮ್ಮದಿಯ ಹುಡುಕಾಟದಲ್ಲಿ ಮಗ್ನವಾಗಿದ್ದರೂ ಯಾವುದೇ ಸುಳಿವಿಲ್ಲದಂತೆ ಬೀರುತ್ತಿದ್ದ ಮಂದಹಾಸ. ಸಾಕಾಗಿ ಹೋಗಿದ್ದ ಹೋರಾಟದಲ್ಲಿ ತೊಡಗಿದ್ದರೂ , ಹೀಗೇ ಸಾಗಿರಲಿ ಎಂಬ ಬಯಕೆ.
ಇರುವಾಗ ಅರಿವಾಗದ , ಕಳೆದುಕೊಂಡ ಮೇಲೆ ಅರಿವಾಗಿ , ಮತ್ತೆ ದೊರಕಿದ ಮೇಲೆ ಅದೇ ನಿರಾಕರಣೆ ಮೂಡುವ ಮನಸ್ಥಿತಿಯ ರಹಸ್ಯವೇನಿರಬಹುದು ?! ಮನಸ್ಸಿಗೆ ಹತ್ತಿರವಾಗಿರುವ ಚೇತನಗಳ ಬಳಿ ಬದುಕಿನ ಸಮಾಚಾರ ಕೇಳಿದಾಗ ..ಕೇಳ ಸಿಗುವ ಉತ್ತರವೊಂದಿದೆ. ” ಹೆಚ್ಚೇನು ಇಲ್ಲ ಮಾರಾಯ …ಇದ್ದದ್ದೇ…ಮಾಮೂಲಿ .” ಹಾಗಾದರೆ ಯಾವುದಾದರೊಂದು ನೂತನವಾದ ಬದಲಾವಣೆ ನಡೆದುಬಿಟ್ಟರೆ …ನಾವು ಅದನ್ನು ಸ್ವಾಗತಿಸುತ್ತೇವೆ ಎಂಬುದು ನಿಜವೇ ? ಆ ” ಮಾಮೂಲಿ ” ಬದುಕು ಆಗ ಅದೇಕೆ ನೆಚ್ಚಿನ ತಾಣವಾಗಿ ಬದಲಾಗಿ ಬಿಡುತ್ತದೆ ?! ಪರಿಸ್ಥಿತಿ ಬದಲಾದಂತೆ ಬದಲಾಗುವ ಅಭಿಪ್ರಾಯಗಳಲ್ಲಿ ಒಂದು ವಿಚಾರ ಇದ್ದೇ ಇರುತ್ತದೆ. ಅದುವೇ ನಮ್ಮ ಅಸಮಾಧಾನ . ಒಂದು ವೇಳೆ ಆನಂದ ದೊರಕಿದರೂ ಮುಂದಿನ ತೊಂದರೆಗಳೆಡೆಗೆ ಮನಸ್ಸು ತೆರಳಿರುತ್ತದೆ. ಮಾಮೂಲಿ ಎಂದು ಕರೆಯುವ ಬದುಕಿನಲ್ಲಿ ಅಡಗಿರುವ ನೆಮ್ಮದಿಯನ್ನು ಹುಡುಕಿ , ಈಗ ಬರುತ್ತೇನೆಂದು ಹೇಳಿ ಅಲ್ಲೆಲ್ಲೋ ದೂರದಲ್ಲಿ ಬಿಟ್ಟುಬಂದಿರುವ ಕನಸುಗಳನ್ನು ಬಳಿಗೆ ಕರೆದು ಅರಿತುಕೊಂಡು ನಾಳೆಯೆಡೆಗೆ ಹೆಜ್ಜೆಯಿರಿಸಿದರೆ ?! ಕತ್ತಲು ಆವರಿಸಿದಾಗ , ಸೂರ್ಯೋದಯಕ್ಕಾಗಿ ಕಾಯುತ್ತ ..ಪರಿಸ್ಥಿತಿಯನ್ನು ದೂರಬಹುದು. ಅಥವಾ , ದೀಪ ಬೆಳಗಿ ಮುನ್ನಡೆಯಬಹುದು. ಎಲ್ಲಾ ಪರಿಸ್ಥಿತಿಗಳಲ್ಲೂ ಒಂದು ಒಳ್ಳೆಯ ಸಮಾಚಾರ ಅಡಗಿರುತ್ತದೆ. ಮುಂದಿನ ಬಾರಿ ಯಾರಾದರು ಸಮಾಚಾರ ಕೇಳಿದಾಗ …ಅದುವೇ ನಿಮ್ಮ ಉತ್ತರವಾಗಿರಲಿ.