ಯಾವುದಾದರೊಂದು ಹೊಸ ಜಾಗಕ್ಕೆ ಭೇಟಿ ನೀಡದೆ ಅಥವಾ ಯಾವುದಾದರೊಂದು ಹೊಸ ಬಗೆಯ ರುಚಿ ಸೇವಿಸದೆ ಕಳೆದ ವಾರಾಂತ್ಯಗಳು ನನಗೆ ಒಗ್ಗರಣೆ ಇಲ್ಲದ ಅಡುಗೆಯಂತೆ ಭಾಸವಾಗಿ ಕಾಡುತ್ತವೆ.ಈ ವಾರಾಂತ್ಯದಲ್ಲಿ ಏನು ಮಾಡಲಿ ಎಂದು ಯೋಚಿಸುತ್ತಾ ಕುಳಿತ್ತಿದ್ದೆ. ಅಷ್ಟರಲ್ಲಿ ಗೆಳೆಯನೋರ್ವ ತನ್ನ ಗೆಳೆಯರೊಂದಿಗೆ ತಾನು ಮುನ್ನಾರ್ ಗೆ ತೆರಳುತ್ತಿರುವುದರ ಬಗ್ಗೆ ತಿಳಿಸಿ , ನನ್ನನ್ನೂ ಆಮಂತ್ರಿಸಿದ. ಹೆಚ್ಚೇನು ಯೋಚಿಸದೆ ಒಪ್ಪಿದೆ. ಆದರೆ ಆಗ , ಅದು ನನ್ನ ಜೀವನದ ಅತ್ಯದ್ಭುತವಾದ ಅನುಭವಗಳಲ್ಲಿ ಒಂದಾಗಲಿದೆ ಎಂಬುದರ ಅರಿವಿರಲಿಲ್ಲ. ಹಾಗಾಗಿ ,ಈ ಲೇಖನದ ನಿಜವಾದ ರೂವಾರಿ ಆ ನನ್ನ ಗೆಳೆಯನೇ. ಅಂದು ರಾತ್ರಿ ತುರ್ತಿನಲ್ಲಿ ಅಗತ್ಯವಿದ್ದ ವಸ್ತುಗಳನ್ನು ಬ್ಯಾಗ್ ನಲ್ಲಿ ತುಂಬಿಸಿ ಹೊರಟುಬಿಟ್ಟೆ. ಆ ಗುಂಪಿನಲ್ಲಿ ನಾನೇ ಕಿರಿಯವನು. ಒಂದು ಮುದ್ದಾದ ಪುಟ್ಟ ಟೆಂಪೋ ನಮ್ಮನ್ನು ಅಲ್ಲಿಗೆ ಕರೆದೊಯ್ಯಲು ಸಿದ್ಧವಾಗಿ ನಿಂತಿತ್ತು. ವಿಂಡೋ ಸೀಟ್ ನಲ್ಲಿ ಕುಳಿತು ಓಡಾಡುತ್ತಿದ್ದ ವಾಹನಗಳ ಹಾರ್ನ್ ಹಾಗು ಧೂಳಿನ ನಡುವೆ , ನಾಳಿನ ಮುನ್ನಾರ್ ಬಗ್ಗೆ ಆಲೋಚಿಸತೊಡಗಿದೆ. ಅದರ ಬಗ್ಗೆ ಕೇಳಿದ್ದ , ಓದಿದ್ದ ಹಾಗು ಅಂತರ್ಜಾಲದಲ್ಲಿ ನೋಡಿದ್ದ ಅಷ್ಟೂ ವಿಚಾರಗಳು ಸೇರಿಕೊಂಡು ಒಂದು ರೀತಿಯ ಕಲ್ಪನೆ ಮೂಡಲಾರಂಭಿಸಿತ್ತು. ಅಲ್ಲಿಗೆ ಅದಾಗಲೇ ಹಲವಾರು ಬಾರಿ ತೆರಳಿದ್ದ ನಮ್ಮ ಡ್ರೈವರ್ ಮಾತ್ರ ನಮ್ಮೆಲ್ಲರ ಮಾತುಕತೆ ಹಾಗು ಚರ್ಚೆಗಳ ನಡುವೆ ತನ್ನ ಪಾಡಿಗೆ ತಾನು ಗೇರ್ ಬದಲಿಸುತ್ತಾ , ವಾಹನ ಚಲಾಯಿಸುತ್ತಿದ್ದ. ನಿದ್ರೆಗೆ ಜಾರಿದ ಸಮಯ ನೆನಪಿಲ್ಲ. ಮರುದಿನ ಎದ್ದಾಗ ಒಂದು ರೋಚಕ ದೃಶ್ಯ ಕಂಡಿತು. ನಾವು ಸಾಗುತ್ತಿದ್ದ ರಸ್ತೆಯ ಎರಡೂ ಬದಿಯಲ್ಲಿ ದಟ್ಟವಾದ ಮಂಜು ಕವಿದಿತ್ತು. ತನ್ನ ಎಲ್ಲಾ ಅನುಭವಗಳನ್ನು ಬಳಸಿ ಡ್ರೈವರ್ ಎದುರಿನಿಂದ ಬರುತ್ತಿದ್ದ ವಾಹನಗಳನ್ನು ನಿಭಾಯಿಸಿಕೊಂಡು ವಾಹನ ಚಲಾಯಿಸುತ್ತಿದ್ದ. ಇದೇ ಮುನ್ನಾರ್ ಇರಬೇಕು ಎಂದು ನನ್ನ ಸಂಭ್ರಮಿಸುವ ಮುನ್ನವೇ , ಪಕ್ಕದಲ್ಲಿ ನನಗಿಂತ ಮೊದಲೇ ಎದಿದ್ದ ನನ್ನ ಗೆಳೆಯ ನಾವು ತಲುಪಲು ಇನ್ನೂ ಬಹಳ ಸಮಯವಿದೆ ಎಂದು ತಿಳಿಸಿಬಿಟ್ಟ. ಇಲ್ಲೇ ಹೀಗಿರಬೇಕಾದರೆ , ಇನ್ನು ಅಲ್ಲಿ ಹೇಗಿರಬಹುದು ಎಂದು ಆಲೋಚಿಸುತ್ತಾ ನಾನು ಮಂಜಿನ ನಡುವೆ ಏನಾದರು ಕಾಣುತ್ತಿದೆಯೇ ಎಂದು ಅವಲೋಕಿಸುತ್ತಾ ಕುಳಿತೆ.
ಇದ್ದ ಉತ್ಸಾಹವೆಲ್ಲಾ ಮರೆಯಾಗಿ ಇನ್ನೇನು ಮತ್ತೆ ನಿದ್ರೆಗೆ ಜಾರುವುದರಲ್ಲಿದ್ದೆ. ಅಷ್ಟರಲ್ಲಿ ಡ್ರೈವರ್ , ” ನೋಡಿ ಟೀ ಎಸ್ಟೇಟ್ ” ಎಂದು ಹೇಳಿ ಹೊಸ ಉತ್ಸಾಹಕ್ಕೆ ಚಾಲನೆ ನೀಡಿಬಿಟ್ಟ. ತುಂಬಾ ದೂರದವರೆಗೆ ಹಚ್ಚ ಹಸಿರಿನ ಟೀ ಗಿಡಗಳು. ಅವುಗಳನ್ನು ನೋಡಿದಾಗಲೇ ಟೀ ಕುಡಿದಷ್ಟು ಆನಂದವಾಗುತ್ತಿತ್ತು. ಅದರ ಜೊತೆಗೆ ಬೃಹದಾಕಾರದ ಬೆಟ್ಟಗಳು. ತಂಪಾದ ಗಾಳಿ. ಕಿರಿದಾದ ದಾರಿ . ಅದರಲ್ಲಿ ಸಾಗುತ್ತಿದ್ದ ನಮ್ಮ ಪುಟ್ಟ ಟೆಂಪೋ.ನಮ್ಮ ವಾಹನದ ಮೇಲೆ ಏನೋ ಹಗುರವಾದ ತುಂಡುಗಳು ನಿರಂತರವಾಗಿ ಬೀಳುತ್ತಾ ಸದ್ದು ಮಾಡುತ್ತಿದ್ದವು. ನಾನಂತೂ ಆ ಸುಂದರವಾದ ಅನುಭವದಲ್ಲಿ ಕಳೆದುಹೋಗಿ , ಅವು ಆ ತಂಪಾದ ವಾತಾವರಣದಲ್ಲಿ ಸೃಷ್ಟಿಯಾಗಿ ಬೀಳುತ್ತಿದ್ದ ಪುಟ್ಟ ಪುಟ್ಟ ಹಿಮಗಡ್ಡೆಗಳು ಎಂದೇ ನಿರ್ಧರಿಸಿಬಿಟ್ಟಿದ್ದೆ. ನನ್ನ ಗೆಳೆಯ ಅವು ಇಳಿಜಾರಿನ ಪ್ರದೇಶದಲ್ಲಿ ಬೆಳೆದಿದ್ದ ಟೀ ಗಿಡಗಳ ಬುಡದಿಂದ ಉದುರಿ ಬೀಳುತ್ತಿದ್ದ ಮಣ್ಣಿನ ಪುಟ್ಟ ಉಂಡೆಗಳು ಎಂದು ತಿಳಿಸಿದಾಗಲೇ ನನಗೆ ಅರಿವಾಗಿದ್ದು. ನಾವು ವಾಸ್ತವ್ಯ ಹೂಡಲಿದ್ದ ಮನೆಯನ್ನು ನಾವೇ ಹುಡುಕಿಕೊಂಡು ಹೋಗಲಾರದೆ , ಕೊನೆಗೆ ಆ ಮನೆಯ ಮಾಲೀಕರೇ ಬಂದು ದಾರಿ ತೋರಿಸಬೇಕಾಯಿತು. ಇದಕ್ಕೆ ಕಾರಣವೂ ಇತ್ತು. ಆ ಪ್ರದೇಶದಲ್ಲಿ ಎಲ್ಲಾ ದಾರಿಗಳೂ ತುಂಬಾ ಕಿರಿದಾಗಿದ್ದವು. ಒಂದಕ್ಕೊಂದು ಅಪ್ಪಿಕೊಂಡ ನೂರಾರು ಮನೆಗಳು. ಅವೆಲ್ಲದರ ನಡುವೆ ಪವಾಡದ ರೀತಿಯಲ್ಲಿ ಇಳಿಜಾರಿನ ರಸ್ತೆಗಳಲ್ಲೂ ಮನೆಗಳ ಎದುರು ನಿಲ್ಲಿಸಿದ್ದ ವಾಹನಗಳು. ಹೆಚ್ಚುಕಮ್ಮಿ ಒಂದೇ ರೀತಿ ಕಾಣುತ್ತಿದ್ದ ಹಲವಾರು ದಾರಿಗಳ ಹಾಗು ಮನೆಗಳ ನಡುವೆ ನಮ್ಮ ಮನೆಯನ್ನು ಹುಡುಕುವುದು ಅಸಾಧ್ಯವೇ ಎಂದು ಅನಿಸಿತ್ತು ನನಗೆ. ಅಲ್ಲಿನ ವಿಚಿತ್ರತೆ ಎಂದರೆ , ಸುಡುಬಿಸಿಲಿದ್ದರೂ ತಂಪಾದ ಗಾಳಿ ಬೀಸುತ್ತಿರುತ್ತದೆ. ಒಂದೇ ಸಮಯದಲ್ಲಿ ಬಿಸಿ ಹಾಗು ಚಳಿಯನ್ನು ಅನುಭವಿಸಲು ಸಾಧ್ಯವಾಗುವ ಅದ್ಭುತ ಸ್ಥಳವೇ ಮುನ್ನಾರ್. ಸುಧಾರಿಸಿಕೊಂಡ ಬಳಿಕ ,ನಾವು ಮೊದಲು ನೋಡಲು ಹೊರಟದ್ದು , ಅಲ್ಲೇ ಹತ್ತಿರದಲ್ಲಿದ್ದ ಜಲಪಾತವನ್ನು . ಅಲ್ಲಿಗೆ ತೆರಳಲು ಇಳಿಜಾರಿನ ಕಿರಿದಾದ ರಸ್ತೆಯಲ್ಲಿ ಸಾಗಬೇಕಿತ್ತು. ಆಟೋದಲ್ಲಿ ತೆರಳುತ್ತಿರಬೇಕಾದರೆ , ಅಲ್ಲಿನ ಭಾಷೆ ತಿಳಿದಿದ್ದ ನನ್ನ ಗೆಳೆಯ ಚಾಲಕನೊಂದಿಗೆ ಅಲ್ಲಿನ ವಿಶೇಷತೆಗಳನ್ನು ವಿಚಾರಿಸುತ್ತಿದ್ದ. ನಾನು ಅಲ್ಲಿಂದಲೇ ಕಾಣುತ್ತಿದ್ದ ಜಲಪಾತವನ್ನು ಇಣುಕಿ ನೋಡುತ್ತಿದ್ದ. ಯಾವ ತಕರಾರು ಇಲ್ಲದೆ ತನ್ನ ಪಾಡಿಗೆ ತಾನು ಹಾಯಾಗಿ ಹರಿಯುತ್ತಿದ್ದ ಆ ಜಲಪಾತವನ್ನು ಕಂಡು ಆನಂದವಾಯಿತು. ನಂತರ , ಮನಸೆಳೆದದ್ದು ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಬೆಟ್ಟವೊಂದರ ಮೇಲಿನಿಂದ ಕಂಡ ಸೂರ್ಯಾಸ್ತ. ಕಲ್ಲು ಬಂಡೆಯ ಮೇಲೆ ಕುಳಿತು , ತಂಪಾಗಿ ಬೀಸುತ್ತಿದ್ದ ಗಾಳಿಯನ್ನು ಆನಂದಿಸುತ್ತಾ ಕಣ್ಣ ಮುಂದೆ ಮೂಡಿದ್ದ ಸುಂದರವಾದ ಚಿತ್ತಾರವನ್ನು ಮನಸಾರೆ ಒಪ್ಪಿಕೊಂಡು ಈ ಸೂರ್ಯಾಸ್ತವಾಗದೆ ಹೀಗೇ ಇರಲಿ ಎಂದು ಪ್ರಾರ್ಥಿಸಿದ ಕ್ಷಣವದು. ನಂತರ ತೆರಳಿದ್ದು ಮುನ್ನಾರ್ ಪೇಟೆಯನ್ನು ಸುತ್ತಲು. ಅಲ್ಲಿ ಸವಿಯಲು ಸಿಕ್ಕ ವಿಶೇಷ ತಿನಿಸುಗಳ ರುಚಿ ಈಗಲೂ ಕಾಡುತ್ತಿದೆ. ಮುನ್ನಾರ್ ನನಗೆ ಇಷ್ಟವಾಗಲು ಅಲ್ಲಿನ ಪೇಟೆಯೂ ಒಂದು ಕಾರಣ. ಪುಟ್ಟದಾದರೂ ಬಹಳ ಸರಳವಾದ ಹಾಗು ಮುದ್ದಾದ ಪೇಟೆಯದು. ಹೆಚ್ಚೇನು ಸದ್ದಿಲ್ಲ. ಗಲಾಟೆ ತಕರಾರುಗಳಿಲ್ಲ. ಪ್ರವಾಸಿಗರನ್ನು ಬಹಳ ವಿನಯದಿಂದ ಸ್ವಾಗತಿಸುವ ವ್ಯಾಪಾರಿಗಳು. ರಾತ್ರಿ ಬಹಳ ಬೇಗನೇ ಹೆಚ್ಚಿನ ಅಂಗಡಿಗಳು ಮುಚ್ಚಿಬಿಡುತ್ತವೆ.ಸೂರ್ಯಾಸ್ತವಾದ ಕೆಲವೇ ಗಂಟೆಗಳಲ್ಲಿ ಚಳಿ ವಿಪರೀತಗೊಳ್ಳುತ್ತದೆ.
ಮರುದಿನ ಬೇಗನೇ ಎದ್ದು ಅಲ್ಲಿನ ಮಂಜನ್ನು ಗಮನಿಸಲು ನಿರ್ಧರಿಸಿದ್ದರೂ , ಎದ್ದಾಗ ಅದಾಗಲೇ ತಡವಾಗಿತ್ತು. ಆ ಮನೆಯ ಮಾಲೀಕರೊಂದಿಗೆ ಬೈಕಿನಲ್ಲಿ ಕುಳಿತು ತಿಂಡಿ ಖರೀದಿಸಲು ಹೊರಟೆ. ಆಗಲೇ ನನಗೆ ಮುನ್ನಾರ್ ನಲ್ಲಿ ಕನ್ನಡ ಕಿವಿಗೆ ಬಿದ್ದದ್ದು. ಅಲ್ಲಿಗೆ ಬರುತ್ತಿದ್ದ ಪ್ರವಾಸಿಗರೊಂದಿಗೆ ಮಾತನಾಡಿಯೇ ಅವರು ಕನ್ನಡವನ್ನೂ ಕಲಿತುಬಿಟ್ಟಿದ್ದರು. ಅವರಿಂದ ತಿಳಿದ ಇನ್ನೊಂದು ವಿಚಾರವೆಂದರೆ , ಮುನ್ನಾರ್ ನಲ್ಲಿ ಸುಮಾರು ನೂರಕ್ಕೂ ಹೆಚ್ಚಿನ ಬಗೆಯ ಟೀ ಪುಡಿಗಳು ದೊರೆಯುತ್ತವೆಯಂತೆ. ಅಂದು ಅಲ್ಲಿನ ವಿಶೇಷವಾದ ಟೀ ಅಂಗಡಿಗೆ ಹಾಗು ಮನಸೆಳೆಯುವ ನೂರಾರು ಬಗೆಯ ಹೂವಿನ ಪ್ರದರ್ಶನವಿದ್ದ ಸ್ಥಳಗಳಿಗೆ ಭೇಟಿ ನೀಡಿದೆವು. ಅದರ ಜೊತೆಗೆ ನನಗೆ ಬಹಳ ಆನಂದ ನೀಡಿದ್ದು , ತೆಪ್ಪದಲ್ಲಿ ವಿಹಾರಿಸಿದ ಕ್ಷಣಗಳು. ನಾನು ತೆಪ್ಪದಲ್ಲಿ ವಿಹಾರಿಸಿದ್ದು ಅದೇ ಮೊದಲ ಬಾರಿಗೆ. ಎಲ್ಲಾ ಆಲೋಚನೆಗಳನ್ನು ಮರೆಸಿ ಮುದನೀಡುವ ಸುಂದರವಾದ ಅನುಭವವದು. ಅದನ್ನು ನಿರ್ವಾಹಿಸಿದವನ ದಿನಚರಿ ಹಾಗು ಸರಳತೆ , ಎಲ್ಲವನ್ನೂ ಮೀರಿದ ಭಾವುಕತೆಯನ್ನು ಹಾಗು ಬದುಕಿನ ಸೌಂದರ್ಯವನ್ನು ನೆನಪಿಸಿತು. ಈ ಇಡೀ ಮುನ್ನಾರ್ ಪಯಣದ್ದುದ್ದಕ್ಕೂ , ಅದಾಗಲೇ ಹಲವು ಬಾರಿ ನೋಡಿದ್ದರೂ ನಮಗಾಗಿ ಉತ್ಸಾಹದಿಂದ ಅನೇಕ ಸ್ಥಳಗಳನ್ನು ಪರಿಚಯಿಸಿದ ಹಾಗು ಕುತೂಹಲಕಾರಿ ವಿಚಾರಗಳನ್ನು ತಿಳಿಸಿದ ನಮ್ಮ ಡ್ರೈವರ್ ಹಾಗು ಅಲ್ಲಿನ ನಿವಾಸಿಗಳನ್ನು ಎಂದಿಗೂ ಮರೆಯಲಾರೆ. ಒಟ್ಟಿನಲ್ಲಿ ಸರಳತೆಯನ್ನು ಸಾರುವ , ಹಿತವಾದ ಸೌಹಾರ್ದತೆಯ ತಂಗಾಳಿ ಬೀಸುವ , ಬದುಕಿನ ಸೌಂದರ್ಯವನ್ನು ನೆನಪಿಸುವ , ಆನಂದದ ತವರೇ ಮುನ್ನಾರ್.