ಇರುವ ನೂರಾರು ವಿಚಾರಗಳನ್ನೆಲ್ಲಾ ಮರೆತು , ಏನಾದರೂ ಹೊಸತನ್ನು ಹುಡುಕಾಡುವ ಮನಸ್ಥಿತಿ ನನಗೆ ಬಹಳ ಕುತೂಹಲಕಾರಿಯಾದದ್ದು ಎಂದನಿಸುತ್ತದೆ. ಅನುಸರಿಸುತ್ತಿರುವ ಹಾಗು ಮಾಡುತ್ತಿರುವ ಕೆಲಸಗಳಿಂದ ಅನುಭವಿಸುತ್ತಿರುವ ಕೆಟ್ಟ ಪರಿಣಾಮಗಳ ಅರಿವಿದ್ದರೂ ಅದನ್ನೇ ಮುಂದುವರಿಸಿಕೊಂಡು ಹೋಗುವ ದಿನಚರಿ ಇನ್ನೊಂದೆಡೆ. ಈ ಎರಡೂ ವಿಚಾರಗಳು ಪರಿಹಾರದ ನೆಪದಲ್ಲಿ ಒಂದಾಗುವ ದಾರಿಗಳು. ಆದರೆ ಈ ಒಂದಾದ ದಾರಿಯಲ್ಲಿ ಸಾಗುವ ಮುಹೂರ್ತ ಮಾತ್ರ , ನಾವೇ ಕರೆದು ಅದು ಬಂದಾಗ ಆಮೇಲೆ ಬರಲು ಹೇಳುವ ಮುಂಜಾನೆಯ ಅಲಾರ್ಮ್ ನಂತೆ. ಏನೇನೋ ಉನ್ನತವಾದ ವಿಚಾರಗಳನ್ನೆಲ್ಲಾ ಆಲೋಚಿಸಿ ಕ್ರಾಂತಿಕಾರಿಯಾಗಲಿರುವ ನಾಳೆಯನ್ನು ಸ್ಮರಿಸಿಕೊಂಡು ನಿದ್ರೆಗೆ ಜಾರುವ ಆ ಧೀರ ನಡೆ. ಮುಂಜಾನೆ ಅವೆಲ್ಲವನ್ನೂ ಮರೆತು ಅದೇ ದಿನಚರಿಗೆ ಶರಣಾಗಿ ಓಡಾಡುವ ಸನ್ನಿವೇಶಗಳು.ಕೆಲವೊಮ್ಮೆ ಹಿಂದಿನ ದಿನ ನಿರ್ಧರಿಸಿದ ವಿಚಾರಗಳನ್ನು ನೆನಪಿಸಿಕೊಂಡು , ಅದು ನಿಜವೋ ಅಥವಾ ಕನಸೋ ಎಂದು ಅವಲೋಕಿಸುತ್ತಾ ಕುಳಿತುಕೊಳ್ಳುವ ಮಜವಾದ ಸಂದರ್ಭಗಳು. ಖಂಡಿತವಾಗಿಯೂ ಸಾಧ್ಯವಾಗುವುದಿಲ್ಲ ಎಂದು ತಿಳಿದಿದ್ದರೂ , ನಿತ್ಯವೂ ಕೈಗೊಳ್ಳುವ ಹೊಸ ನಿರ್ಧಾರಗಳು. ತಪ್ಪಿನ ಅರಿವಿದ್ದರೂ ಏನೂ ಆಗದಂತೆ ನಗುವ ಮುಗ್ಧತೆ ಬೇರೆ.
ಕೇವಲ ನಿರ್ಧಾರದ ಮಟ್ಟದಲ್ಲೇ ಉಳಿದುಹೋಗಿ ನಮ್ಮ ಕರೆಯನ್ನು ನಿರೀಕ್ಷಿಸುತ್ತಿರುವ ಅದೆಷ್ಟೋ ಹೊಸ ವಿಚಾರಗಳನ್ನು ಒಮ್ಮೆ ಸಂದರ್ಶಿಸಬೇಕು. ಆ ವಿಚಾರವನ್ನು ನಾವು ನಿರ್ಧರಿಸಲು ಕಾರಣವೇನಾಗಿರಬಹುದು ?! ಇತರರನ್ನು ಗಮನಿಸಿ ತೆಗೆದುಕೊಂಡ ನಿರ್ಧಾರವೇ ?! ಯಾರೋ ಒಳ್ಳೆಯದು ಎಂದು ಹೇಳಿದ್ದರಿಂದ ನಾವೂ ತಲೆಯಾಡಿಸಿ ಒಪ್ಪಿಕೊಂಡ ನಿರ್ಧಾರವೇ ?! ಅಥವಾ ನಿಜವಾಗಿಯೂ ನಮಗೆ ಅಗತ್ಯವಿರುವ ಹಾಗು ಉಪಯುಕ್ತವಾದ ನಿರ್ಧಾರವೇ ?! ಉಯ್ಯಾಲೆಯಂತೆ ಇರುವ ನಮ್ಮ ಮನಸ್ಸನ್ನು ಈ ಕುರಿತು ಕೇಳುವುದು ಸ್ವಲ್ಪ ಕಷ್ಟವೇ. ಏಕೆಂದರೆ ಸುಮ್ಮನಿದ್ದರೂ ನಾವೇ ಹೋಗಿ ದೂಡುವ ಉಯ್ಯಾಲೆ ಅದು. ಬೇಕು ಬೇಡಗಳನ್ನು ಅರಿತು , ಉಪಯುಕ್ತವಾದ ಸುಗಂಧ ತುಂಬಿದ ಹೂವು ಕಾಣಸಿಗುವುದು ವಿವೇಕದ ನೀರನ್ನು ಹೀರುವ ಗಿಡಗಳಿರುವ ಉದ್ಯಾನದಲ್ಲಿ. ಇನ್ನು ಮುಂದೆ ಯಾವುದಾದರೊಂದು ಹೊಸ ನಿರ್ಧಾರವನ್ನು ಕೈಗೊಳ್ಳುವ ಮುನ್ನ , ಈ ಉದ್ಯಾನವನ್ನೊಮ್ಮೆ ಸುತ್ತಿ ಬರೋಣ. ಆ ಹೂವು ಅಲ್ಲಿ ದೊರೆತರೆ , ಅದರ ಮನತಣಿಸುವ ಸೌಂದರ್ಯವನ್ನು ಹಾಗು ಸುಗಂಧದ ಅನಂದವನ್ನು ಅನುಭವಿಸದೆ ಪಕ್ಕಕ್ಕಿಡುವ ತಪ್ಪು ನಾವು ಮಾಡದಿರಬಹುದು. ಮಾಡಿದರೂ ಅದು ಬಾಡಿದಾಗ , ಪಶ್ಚಾತಾಪವಾಗಿ ಮುಂದೆ ಆ ತಪ್ಪು ಮಾಡಲಾರೆವು. ಏನಂತೀರಿ ?