ಬಹಳ ದಿನಗಳ ನಂತರ ಮನೆಗೆ ಹಿಂದಿರುಗಿ ಬಂದಾಗ ಆಗುವ ಅನುಭವ ಬಹಳ ವಿಶೇಷವಾದದ್ದು. ಬೇರೆ ಯಾವುದೇ ಊರಿಗೆ ಹಾಗೋ ಹೀಗೋ ಒಂದೆರಡು ಒಳ್ಳೆಯ ವಿಚಾರಗಳನ್ನು ಹುಡುಕಿಕೊಂಡು ಹೊಂದಿಕೊಂಡಿದ್ದರೂ , ತವರೂರಿಗೆ ಬಂದಾಗ ಅವೆಲ್ಲವೂ ಮರೆತುಹೋಗಿಬಿಡುತ್ತದೆ. ಮರಳುಗಾಡಿನಲ್ಲಿದ್ದವನಿಗೆ ಸಮುದ್ರ ಕಂಡಾಗ ಆಗುವ ಆನಂದದಂತಿರುತ್ತದೆ ಆ ಕ್ಷಣ. ಅಪರಿಚಿತರೂ ನಮ್ಮವರು ಎಂದು ಸ್ವೀಕರಿಸುವ ಸುಂದರ ಮನಸ್ಥಿತಿ ಇರುತ್ತದೆ. ಬಸ್ ಇಳಿದು ಮನೆಯವರೆಗೆ ರಿಕ್ಷಾದಲ್ಲಿ ತೆರಳುವಾಗ , ಆತ ಊರಿನಲ್ಲಿ ಇತ್ತೀಚಿಗೆ ನಡೆದ ಯಾವುದಾದರೂ ಬದಲಾವಣೆಗಳಿದ್ದರೆ , ಅದನ್ನು ಮಾತನಾಡದೆ ನಮಗೆ ಸೂಚಿಸುವ ರೀತಿ ಎಲ್ಲವನ್ನೂ ಮೀರಿ ಆನಂದ ನೀಡುವಂತದ್ದು. ಊರಿನ ಬೀದಿಗಳಲ್ಲಿ ತೆರಳುವಾಗ , ಇದು ನಮ್ಮ ಊರು ಎಂಬ ಹೆಮ್ಮೆ ನಮ್ಮಿಬ್ಬರ ಮನಸ್ಸಿನಲ್ಲೂ ಅಲೆದಾಡುತ್ತಿರುತ್ತದೆ.ಕೆಲವೊಮ್ಮೆ ಆತ ಊರಿನ ಕೆಲವು ವಿಚಾರಗಳ ಬಗ್ಗೆ ತನ್ನ ಅಭಿಪ್ರಾಯವನ್ನು ತಿಳಿಸಿ , ನಾನು ನನ್ನ ಅಭಿಪ್ರಾಯ ತಿಳಿಸುವ ಮೊದಲೆ ಇನ್ನೊಂದು ವಿಚಾರ ಪ್ರಸ್ತಾಪಿಸಿಬಿಡುವ ಪ್ರಸಂಗಗಳು ಬಹಳ ಮಜವಾದದ್ದು. ನಿತ್ಯವೂ ಹೆಚ್ಚು ಕಮ್ಮಿ ಇಡೀ ಊರನ್ನು ತಿರುಗಾಡುವ ಅವರು , ಗಮನಿಸಿದ ಅದೆಷ್ಟೊ ವಿಚಾರಗಳನ್ನು ಇನ್ಯಾರ ಬಳಿ ಹೇಳಿಕೊಳ್ಳಬೇಕು. ತಾತ್ಕಾಲಿಕ ಬಂಧುವಾದರೂ ಅಲ್ಲೊಂದು ಬಾಂಧವ್ಯವಿದೆ.
ಮನೆ ತಲುಪಿದಾಗ , ನನ್ನ ಮನೆಯವರು ಪಡುವ ಆನಂದದಷ್ಟೇ ಆನಂದಪಟ್ಟು ನಗುವ ವಾಚ್ ಮ್ಯಾನ್ ನ ಮುಖ ಎಂದಿಗೂ ಮರೆಯಲು ಸಾಧ್ಯವಿಲ್ಲ. ನನ್ನ ಬದುಕಿನ ಅನೇಕ ಹಂತಗಳನ್ನು ಅದೇ ಸ್ಥಳದಲ್ಲಿ ನಿಂತು ಗಮನಿಸಿರುವ ಅವರ ಅನುಭವ ತುಂಬಿದ ಸ್ವಾಗತ ಹಾಗು ಪ್ರೀತಿ ಬಹಳ ಅಮೂಲ್ಯವಾದದ್ದು. ಎಲ್ಲಾ ಮಾತುಕತೆಗಳ ನಂತರ ಕೆಲವು ಕ್ಷಣಗಳ ಕಾಲ ಮನೆಯ ಒಂದು ಭಾಗದಲ್ಲಿ ಒಬ್ಬನೇ ಕೂತಾಗಲೆಲ್ಲಾ ನನ್ನನ್ನು ಸೆಳೆಯುವುದು , ಏಳನೆ ಮಹಡಿಯ ನಮ್ಮ ಮನೆಯ ಎರಡೂ ಬಾಲ್ಕನಿಗಳಲ್ಲಿ ನನ್ನ ಅಮ್ಮ ಪ್ರೀತಿಯಿಂದ ಬೆಳೆಸಿರುವ ಹೂದೋಟ. ಅಲ್ಲಿರುವ ಅಷ್ಟೂ ಗಿಡಗಳಲ್ಲಿ ನಿತ್ಯವೂ ಯಾವುದಾದರೊಂದು ಗಿಡದಲ್ಲಿ ಹೂವು ಖಂಡಿತವಾಗಿಯೂ ಅರಳುತ್ತದೆ. ನಿನ್ನೆ ಯಾವು ಹೂವು ಅರಳಿತ್ತು , ನಾಳೆ ಯಾವ ಹೂವು ಅರಳಲಿದೆ ಎಂದು ಬಹಳ ಉತ್ಸಾಹದಿಂದ ಆಕೆ ವಿವರಿಸುವ ರೀತಿ ಕಂಡಾಗಲೆಲ್ಲಾ , ಎಲ್ಲವನ್ನೂ ದೂರುತ್ತಾ , ನೆಪವನ್ನು ನೀಡುತ್ತಾ ಬದುಕುವ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಎಂದನಿಸುತ್ತದೆ. ಅಲ್ಲೇನು ಹೆಚ್ಚು ಸ್ಥಳವಿಲ್ಲ. ಭೂಮಿಯಲ್ಲಿ ದೊರಕುವಷ್ಟು ಸಹಾಯವೂ ಈ ಎತ್ತರದಲ್ಲಿರುವ ಗಿಡಗಳಿಗೆ ದೊರಕುವುದಿಲ್ಲ. ಅಮ್ಮನಿಗೆ ಹಲವಾರು ವರ್ಷಗಳ ಹಿಂದೆ , ಹಳೆಮನೆಯ ಸುತ್ತಲೂ ಇದ್ದ ದೊಡ್ಡ ಸ್ಥಳದ ತುಂಬೆಲ್ಲಾ ಗಿಡಗಳನ್ನು ಬೆಳೆಸಿದ ಅನುಭವ ಹಾಗು ಸಿಹಿನೆನಪಿದೆ. ಆದರೂ ಇಂದು ಇರುವಷ್ಟು ಸ್ಥಳದಲ್ಲಿ ಅಷ್ಟೇ ಪ್ರೀತಿಯಿಂದ ಗಿಡಗಳನ್ನು ಬೆಳೆಸುತ್ತಾ .. ಆಚೆ ಈಚೆ ಓಡಾಡುವಾಗ ಅರಳಿರುವ ಹೂವುಗಳನ್ನು ನೋಡಿ ಆನಂದಿಸುತ್ತಾಳೆ. ಯಾವ ಕುರ್ಚಿಯ ಮೇಲೆ ಕುಳಿತರೂ ಸಿಗದಷ್ಟು ಆನಂದ ಆ ಗಿಡಗಳ ನಡುವೆ ಕುಳಿತಾಗ ಸಿಗುತ್ತದೆ. ಆ ಗಿಡಗಳ ನಡುವಿನಲ್ಲಿರುವ ಪುಟ್ಟ ಜಾಗದಲ್ಲಿ ಕುಳಿತು ದೂರದಲ್ಲಿ ಕಾಣುತ್ತಿರುವ ಸಾಗರವನ್ನು ನೋಡುತ್ತಾ ..ತಂಗಾಳಿಯ ಕಚಗುಳಿಗೆ ನಾಚಿ ನಗುವ ಹೂವುಗಳನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ನನಗಿದೆ . ಬೇರೆ ಊರಿನ ಧೂಳು ಹಾಗು ಟ್ರಾಫಿಕ್ ಅನ್ನು ಮರೆಸಿ ಮನಸ್ಸಿಗೆ ಆನಂದ ನೀಡಿ , ನನ್ನ ಊರಿನ ಅಂದವನ್ನು ಸಾರುವ ಆ ಹೂವೇ ನನ್ನ ನೆಮ್ಮದಿ ಮತ್ತು ನಗುವಿನ ರೂವಾರಿ ಹಾಗು ಆಗಾಗ ನನ್ನ ಕವಿತೆಗಳಲ್ಲಿ ಕಾಣ ಸಿಗುವ ವಿಶೇಷ ಅತಿಥಿ.