ಮನೆಯಿಂದ ದೂರದಲ್ಲೆಲ್ಲೊ ಕಾರಣಾಂತರಗಳಿಂದ ವಾಸಿಸುವಾಗ , ಅನೇಕ ತಪ್ಪು ಕಲ್ಪನೆಗಳ ಅರಿವಾಗುತ್ತದೆ. ಇಲ್ಲಿಂದ ದೂರ ಹೋಗಿ ಎಲ್ಲಾದರೂ ಒಬ್ಬನೇ ಆರಾಮವಾಗಿ ಇರಬಹುದು , ಎಲ್ಲಾ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನನಗೀಗ ಇದೆ. ಹೀಗೆಂದು ಮನೆಯಲ್ಲಿ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತಿರುವಾಗ ಆಲೋಚಿಸಿದ್ದು ಮತ್ತೆ ಮತ್ತೆ ನೆನಪಾಗುತ್ತದೆ. ಮನೆಯವರ ಪ್ರಶ್ನೆಗಳು , ಅದರ ಹಿಂದಿದ್ದ ನಮ್ಮ ಮೇಲಿನ ಕಾಳಜಿ , ಕಿರಿಕಿರಿ ಎಂದನಿಸುತ್ತಿದ್ದ ಸಲಹೆಗಳು ..ಈಗ ಕೈ ಹಿಡಿದು ರಕ್ಷಿಸುತ್ತಿರುವ ರೀತಿಯನ್ನು ಮೂಕನಾಗಿ ಗಮನಿಸುತ್ತಾ , ಎಂದೂ ವ್ಯಕ್ತಪಡಿಸದ ಕೃತಜ್ಞತೆಯೊಂದಿಗೆ ರಾತ್ರಿ ಮಲಗುವ ದಿನಚರಿ. ಇದೊಂದು ರೀತಿಯಲ್ಲಿ , ಊರ ಹಬ್ಬವೆಲ್ಲಾ ಮುಗಿದ ಮರುದಿನ ಆವರಿಸುವ ಮೌನದಂತೆ. ಅದೇ ಜಾಗವಾದರೂ , ಇಂದು ಯಾವುದೇ ಸಡಗರದ ಶಬ್ಧವಿಲ್ಲ. ರಂಗುರಂಗಾಗಿ ಕಂಗೊಳಿಸುತ್ತಿದ್ದ ಊರು ಇಂದು ಬಿಕೋ ಎನ್ನುತ್ತಿದೆ. ಇಂತಹ ಸಂಭ್ರಮವಿಲ್ಲದ , ಗಲಾಟೆಗಳ ನಡುವೆಯೂ ದೊರೆಯುತ್ತಿದ್ದ ಆನಂದವು ಮರೆಯಾಗಿರುವ ಊರಿನ ಸ್ಥಿತಿ ತಲುಪಿರುತ್ತದೆ ಮನಸ್ಸು. ಇಲ್ಲಿರುವ ಅನೇಕ ಸವಾಲುಗಳ ನಡುವೆ ವಿರಾಜಿಸುವ ಸಮಸ್ಯೆ ಎಂದರೆ ಊಟ ತಿಂಡಿ ಎಂಬ ಹಿಂದೆ ಕಡೆಗಣಿಸಲ್ಪಟ್ಟಿದ್ದ ವಿಚಾರ. ಯಾವುದೋ ವೀಡಿಯೋ ನೋಡಿಕೊಂಡು ಊಟ ತಯಾರಿಸುವ ಸಾಹಸ ಒಂದೆರಡು ವಾರಗಳಲ್ಲೇ ನಿಂತು ಬಿಟ್ಟ ನಂತರ ಮೊರೆಹೋಗಲೇ ಬೇಕಾದದ್ದು ಮನೆಬಾಗಿಲಿಗೆ ಬಂದು ಊಟ ತಲುಪಿಸುವ ಫುಡ್ ಡೆಲಿವರಿಯ ಸೌಲಭ್ಯದೆಡೆಗೆ. ಅದರಲ್ಲೂ ನೂರೆಂಟು ಆಯ್ಕೆಗಳು . ಅದನ್ನು ನಿರ್ಧರಿಸುವಷ್ಟರಲ್ಲಿ , ಹಸಿವೇ ಸ್ವತಹ ಇರಲಿ ಬಿಡು ನಾನೇ ಹೊರಡುತ್ತೇನೆ ಎಂದು ತೆರಳಿಬಿಡುವ ವಿಚಿತ್ರ ಸನ್ನಿವೇಶಗಳು. ಊಟ ತಂದು ನೀಡುವಾತನೊಂದಿಗೆ ಹಂಚಿಕೊಳ್ಳುವ ತಾತ್ಕಾಲಿಕವಾದ ಸಂಬಂಧ. ಆತ ಕರೆಮಾಡಿ ವಿಳಾಸ ಕೇಳುವಾಗ , ನಮ್ಮ ಮದುವೆಗೆ ಬರಲಿರುವ ಬಂಧುವಿಗೆ ತಿಳಿಸುವಂತಹ ರೀತಿಯಲ್ಲಿ ನಾವು ವಿಳಾಸ ತಿಳಿಸುವ ಆ ಉತ್ಸಾಹ. ನಮ್ಮ ಮನೆಗೆ ಬರಲಿರುವ ಸಂಬಂಧಿಕರಿಗೂ ಕಾಯದಷ್ಟು ಕಾತುರತೆಯೊಂದಿಗೆ ಆತನಿಗಾಗಿ ಕಾಯುವ ನಮ್ಮ ಪರಿಸ್ಥಿತಿ. ಆತ ಕೊನೆಗೂ ಬಂದಾಗ ಪರಸ್ಪರ ನೋಡಿಕೊಂಡು ಹಂಚಿಕೊಳ್ಳುವ ಅರ್ಧ ನಗು. ಆಮೇಲೆ ಆತನನ್ನು ಸಂಪೂರ್ಣವಾಗಿ ಮರೆತು , ಊಟದೆಡೆಗೆ ತೆರಳುವ ನಮ್ಮ ಗಮನ. ಇಷ್ಟವಾದರೂ ಆಗದಿದ್ದರೂ , ನೀಡುವ ರೇಟಿಂಗ್ ಹಾಗು ಫೀಡ್ ಬ್ಯಾಕ್ . ಗೆಳೆಯರಿಗೆ ಈ ಕುರಿತು ನೀಡುವ ಸಲಹೆಗಳು. ಆ ಹೊಟೇಲನ್ನು ಹೊಗಳಿ ಕೊಂಡಾಡುವ ನಮ್ಮ ಪದಗಳು. ಇವೆಲ್ಲದರ ನಡುವೆ ಆಲೋಚಿಸಬೇಕಾದ ವಿಚಾರವೊಂದಿದೆ. ಅದೆಷ್ಟೋ ತನ್ನದೆ ಆದ ಸಮಸ್ಯೆಗಳನ್ನು ಬದಿಗಿರಿಸಿ ಸಮಯಕ್ಕೆ ಸರಿಯಾಗಿ ಬಂದು ಆತ ಊಟ ತಲುಪಿಸುತ್ತಾನೆ. ಕೆಲವೊಮ್ಮೆ ನಮ್ಮ ಮನೆಯ ನೆನಪನ್ನು ಮರೆಸುವಂತಹ ರೀತಿಯಲ್ಲಿ ಹಲವಾರು ಹೊಟೇಲ್ ಗಳು ಕಾರ್ಯನಿರ್ವಹಿಸುತ್ತಿವೆ. ಇವೆಲ್ಲದಕ್ಕೆ ಸೂಕ್ತವಾಗಿ ನಾವು ನಮ್ಮ ಅಭಿಪ್ರಾಯವನ್ನು ಅವರಿಗೆ ಹಾಗು ಇತರರಿಗೂ ತಿಳಿಸುತ್ತೇವೆ. ಇಷ್ಟವಾದಾಗ ಮೆಚ್ಚಿ ಹೊಗಳುತ್ತೇವೆ. ಆದರೆ , ಅದೆಷ್ಟೋ ವರ್ಷಗಳಿಂದ ಪ್ರತಿನಿತ್ಯ ಮುಂಜಾನೆ ಮನೆಯಲ್ಲಿ ಎಲ್ಲರೂ ಎದ್ದೇಳುವ ಮೊದಲು ಎದ್ದು , ಯಾವ ಪ್ರತಿಫಲವನ್ನೂ ಬಯಸದೆ ಎಲ್ಲರಿಗಾಗಿ ಅಡುಗೆ ಮಾಡಿ ಬಡಿಸುವ ನಮ್ಮ ತಾಯಿಗೆ , ನಾವದೆಷ್ಟು ಬಾರಿ ನಮಗೆ ಇಷ್ಟವಾದಾಗ ಆ ಅಭಿಪ್ರಾಯವನ್ನು ತಿಳಿಸಿದ್ದೇವೆ ?!? ತನ್ನ ನೂರೆಂಟು ಸಮಸ್ಯೆಗಳ ನಡುವೆಯೂ , ಎಲ್ಲರಿಗೂ ಹಿತವೆನಿಸುವ ರೀತಿಯಲ್ಲಿ ಅಡುಗೆ ಮಾಡುವ , ತನ್ನ ಆರೋಗ್ಯ ಕೆಟ್ಟಾಗಲೂ ಅದನ್ನು ತನ್ನೊಳಗೇ ಇರಿಸಿಕೊಂಡು ಅಡುಗೆಮನೆಯಲ್ಲಿ ಒದ್ದಾಡುವ , ಮನೆಯವರೆಲ್ಲಾ ಹೊರೆಗೆ ಹೋದರೂ ತಾನು ಮಾತ್ರ ಮನೆಯಲ್ಲೇ ತನ್ನ ಆನಂದವನ್ನು ಹುಡುಕಿಕೊಂಡು ನಮ್ಮ ಸಮಸ್ಯೆಗಳನ್ನು ಆಲಿಸುವ , ಊಟ ಚೆನ್ನಾಗಿಲ್ಲವೆಂದು ನಾವು ನೇರವಾಗಿ ಹೇಳಿದಾಗ ಆ ನೋವನ್ನು ತೋರಿಸಿಕೊಳ್ಳದ ನಮ್ಮ ತಾಯಿ ಅದೆಷ್ಟು ವರ್ಷಗಳಿಂದ ಆ ಒಂದು ತೃಪ್ತಿಗಾಗಿ ಕಾದಿರಬಹುದು ?! ಖುಷಿಯಾದಾಗ , ಆಕೆಯ ಕಣ್ಣಿನಲ್ಲಿ ಕಣ್ಣಿಟ್ಟು , ” ಅಮ್ಮ , ಊಟ ಚೆನ್ನಾಗಿದೆ ” ಎಂದು ಹೇಳುವಷ್ಟು ಸಮಯವೂ ನಮ್ಮ ಬಳಿ ಇಲ್ಲವೆ ?!? ಇದ್ದರೂ ಹೇಳದಿರುವಷ್ಟು ಕಲ್ಲು ಹೃದಯ ಏತಕೆ ?!