ನಮ್ಮ ಸುತ್ತಮುತ್ತಲಿನವರನ್ನು ಗಮನಿಸಲು ಸಮಯ ಸಿಗುವುದು ರಜಾ ದಿನಗಳಲ್ಲಿ ಮಾತ್ರ ಎಂಬ ವಿಚಾರವನ್ನು ಅವಲೋಕಿಸುತ್ತಾ , ಮಾಡಲು ಯಾವುದೇ ಕೆಲಸವಿಲ್ಲದಷ್ಟು ಸ್ವಾತಂತ್ರ್ಯದಿಂದ ನಿಧಾನವಾಗಿ ನಡೆದುಕೊಂಡು ಹೋಗುತ್ತಿದ್ದೆ. ಬೇರೆ ದಿನಗಳಲ್ಲಾದರೆ , ಎದುರಿಗೆ ಬರುವವರನ್ನೆಲ್ಲಾ ದಿಟ್ಟಿಸುತ್ತಾ , ಆಚೆ ಈಚೆ ಸರಿದು , ಯಾವ ವಾಹನದಿಂದಲೂ ಕೆಸರನ್ನು ಎರಚಿಸಿಕೊಳ್ಳದಂತೆ ಎಚ್ಚರ ವಹಿಸಿ , ಆಗಾಗ ಸಮಯ ಎಷ್ಟಾಯಿತೆಂದು ಗಮನಿಸುತ್ತಾ , ಬೇರೆಯವರೆಲ್ಲರಿಗಿಂತಲೂ ನಾನು ಮೊದಲು ತಲುಪಬೇಕು ಎಂದು ಅನಾವಶ್ಯಕವಾದ ಅವಸರದಿಂದ ಹೆಜ್ಜೆಯಿಡುವುದು ಮಾಮೂಲಿ. ನಿತ್ಯವೂ ಅಲೆದಾಡುವ ಅದೇ ದಾರಿ ,ವಿನ್ಯಾಸಗೊಂಡಂತೆ ಅನಿಸುತ್ತಿತ್ತು. ಎಷ್ಟೊಂದು ವಿವಿಧತೆಯಿಂದ ಕೂಡಿದ ದೃಶ್ಯಗಳು. ಅಲ್ಲಿ ಎದುರಾಗುತ್ತಿದ್ದ ಪ್ರತಿ ಮುಖದಲ್ಲೂ ಏನಾದರೊಂದು ಸುಳಿವು ಎದ್ದು ಕಾಣುತ್ತಿತ್ತು. ನಾನು ಪ್ರತಿ ಮುಂಜಾನೆ ನಡೆದುಕೊಂಡು ಹೋಗುವಾಗ , ನಾನು ಹಾದು ಹೋಗುವವರೆಗೆ ಕಾದು ನಂತರ ತನ್ನ ಅಂಗಡಿ ಎದುರು ನೀರು ಎರಚಿ ಶುಚಿಗೊಳಿಸುವ ಕೆಲಸ ಮುಂದುವರೆಸುವಾತ , ಯಾವುದೋ ಒಂದು ವ್ಯವಹಾರದಲ್ಲಿ ನಿರತನಾಗಿದ್ದ. ಆ ನೀರಿನ ಬಿಂದಿಗೆ ಅಲ್ಲೇ ಹೊರಗಿತ್ತು. ಚುಮುಚುಮು ಚಳಿಯ ಸಾಯಂಕಾಲದ ಹೊತ್ತಿನಲ್ಲಿ ಒಂದಷ್ಟು ಬಿಸಿಬಿಸಿ ತಿಂಡಿಗಳನ್ನು ಕೊಳ್ಳಲು ಅಂಗಡಿಯೊಂದರ ಎದುರಿನಲ್ಲಿ ಮುಗಿಬಿದ್ದಿದ್ದ ಜನರು. ಅವೆಲ್ಲವನ್ನೂ ಲೆಕ್ಕಿಸದೆ ತನ್ನ ಪಾಡಿಗೆ ಪತ್ರಿಕೆ ಓದ್ದುತ್ತಾ ಅಲ್ಲೇ ಪಕ್ಕದಲ್ಲಿ ಕುಳಿತ್ತಿದ್ದ ಮುದುಕ. ಮುಂಜಾನೆಯಿಂದ ವ್ಯಾಪಾರ ನಡೆಸಿ , ಇನ್ನೇನು ಎಲ್ಲಾ ಖಾಲಿಯಾಗಲಿದೆ ..ಹೊರಟುಬಿಡಬಹುದು ಎಂಬ ಆನಂದದಲ್ಲಿದ್ದ ಹಲವು ಕಣ್ಣುಗಳು. ಜನರು ಬಂದೇ ಬರುತ್ತಾರೆ ಎಂಬ ಆತ್ಮವಿಶ್ವಾಸದಿಂದ ಜಿಲೇಬಿ ತಯಾರಿಸುತ್ತಿದ್ದ ಅನುಭವಿ. ಇನ್ನೇನು ಮರೆತೆ ಎಂದು ಆಲೋಚಿಸುತ್ತಾ ತನ್ನ ಕೈಚೀಲದೊಳಗೆ ಇಣುಕಿ ನೋಡುತ್ತಿದ್ದ ಸಂಸಾರಸ್ಥ. ಆಗ ತಾನೆ ಭೇಟಿಯಾಗಿ ಸುಖದುಖಗಳನ್ನು ಹೊಟೇಲ್ ಒಂದರ ಎದುರಿನಲ್ಲಿ ನಿಂತು ಹಂಚಿಕೊಳ್ಳುತ್ತಿದ್ದ ಫುಡ್ ಡೆಲಿವರಿಯ ಕೆಲಸ ಮಾಡುವ ಅನೇಕ ಸಹೃದಯಿಗಳು. ಎಲ್ಲವನ್ನೂ ಹಾಸ್ಯದ ದೃಷ್ಟಿಯಿಂದ ಗಮನಿಸಿ ಆನಂದಿಸುತ್ತಾ ಸಾಗುತ್ತಿದ್ದ ಗೆಳೆಯರ ಗುಂಪು. ಇವರೆಲ್ಲರ ನಡುವೆ , ರಜೆ ಮುಗಿಯಿತ್ತಲ್ಲಾ ಎಂದು ಶೋಕಿಸುತ್ತಿದ್ದ ನಾನು. ಅದಾಗಲೇ ನಿಂತು ಟೀ , ಕಾಫಿ ಕುಡಿಯುತ್ತಿದ್ದ ಹಲವರ ನಡುವಿನಲ್ಲಿ ನುಸುಳಿಕೊಂಡು ಹೋಗಿ , ಒಂದು ಟೀ ಕೊಡಿ ಎಂದೆ. ಅದು ಆತ ನೀಡಿದ ಆ ದಿನದ ಎಷ್ಟನೇಯ ಟೀ ಎಂದು ಗೊತ್ತಿಲ್ಲ. ಒಟ್ಟಿನಲ್ಲಿ ಯಾವ ಭಾವವೂ ಇಲ್ಲದ ಮುಖದೊಂದಿಗೆ , ತಗೊಳಿ ಎಂದು ಇಟ್ಟುಬಿಟ್ಟ. ಹಿತವಾದ ಚಳಿಗಾಲದಲ್ಲಿ , ಬಿಸಿಬಿಸಿ ಟೀ ಕುಡಿಯುತ್ತಿರುವಾಗ , ಮಳೆ ಬಂದು ಬಿಟ್ಟರೆ ಇನ್ನೂ ಹಿತವಾಗಿರುತ್ತದೆ ಎಂದನಿಸಿತು. ಕೂಡಲೇ ಒಣಗಲು ಹಾಕಿದ್ದ ಬಟ್ಟೆಗಳು ಹಾಗು ರೂಮ್ ನಲ್ಲೇ ಬಿಟ್ಟು ಬಂದಿದ್ದ ಕೊಡೆ ಎರಡೂ ನೆನಪಾಗಿ , ಈಗಿರುವ ಹವಾಮಾನವೇ ಅದ್ಭುತವಾಗಿದೆ ಎಂದು ಸಮಾಧಾನ ಪಟ್ಟೆ. ಟೀ ಕುಡಿದು , ಹಣ ನೀಡಿ ..ರೂಮ್ ಕಡೆಗೆ ಹಿಂದಿರುಗಿ ಬರುವಾಗ ಒಂದು ವಿಚಾರ ಕಾಡತೊಡಗಿತು. ಈ ಟೀ ಅಂಗಡಿಯವನು ನಿತ್ಯವೂ ಅವನೇ ಇರುತ್ತಾನೆ. ಅದೇ ರುಚಿಯ ಟೀಯನ್ನೇ ಕೊಡುತ್ತಾನೆ. ನಾನು ಅಲೆದಾಡುವ ಈ ನಿತ್ಯದ ದಾರಿಯೂ ಬದಲಾಗುವುದಿಲ್ಲ. ಆದರೂ ಇಂದು ದೊರೆತ ಆನಂದ ನಾಳೆ ಮತ್ತೆ ಬಂದರೆ ಸಿಗದಿರಬಹುದು. ನಿತ್ಯವೂ ಕೊರಗುತ್ತಾ ಕುಳಿತರೆ ಬದುಕು ಬದಲಾಗಲಾರದು. ಸ್ವಲ್ಪ ಕಣ್ತೆರೆದು ಗಮನಿಸಿ , ಎಲ್ಲರೊಂದಿಗೂ ಬೆರೆತು , ಚಿಕ್ಕಪುಟ್ಟ ಆನಂದದ ಕ್ಷಣಗಳನ್ನು ಮನಸಾರೆ ಸ್ವೀಕರಿಸಿ , ಅದೇ ಬದುಕನ್ನು ಪ್ರೀತಿಸುವ ಅವಕಾಶ ನಮ್ಮ ಬಳಿಯೇ ಇದೆ ಅಲ್ಲವೇ ?