ನನ್ನ ರೂಮ್ ಮೇಟ್ ಹಾಗು ಟ್ರೆಕ್ ಲೀಡ್ ಸ್ವಲ್ಪ ಹಿಂದೆಯ ತನಕ ಹೋಗಿ ನೋಡಿಕೊಂಡು ಬಂದರು. ಕಾಲು ನೋವಾಗುತ್ತಿದ್ದ ಕಾರಣ ಆತ ಅಲ್ಲೇ ಹಿಂದೆಲ್ಲೋ ಕುಳಿತು ಬಿಟ್ಟಿದ್ದ . ಆತನನ್ನು ವಿಶ್ರಾಂತಿ ಪಡೆದುಕೊಳ್ಳಲಿ ಎಂದು ನೀರು ಹರಿಯುತ್ತಿದ್ದ ಜಾಗದ ಬಳಿ ಬಿಟ್ಟು , ನಾವು ಮುನ್ನಡೆದೆವು. ಸುಮಾರು ಇಪ್ಪತ್ತು ನಿಮಿಷಗಳ ನಂತರ ಕೊನೆಗೂ ಕಲ್ಲು ಮಂಟಪ ತಲುಪಿದೆವು. ಟ್ರೆಕ್ ಆರಂಭಿಸುವಾಗ ತೆಗೆದುಕೊಂಡಿದ್ದ ಪುಲಾವ್ ಸೇವಿಸಲು ಇದುವೇ ಸೂಕ್ತ ಸಮಯ ಎಂದು ನಿರ್ಧರಿಸಿದೆವು. ಒಟ್ಟಿನಲ್ಲಿ ಅದೆಷ್ಟೋ ಸಾಹಸಿಗಳು ಬೆಟ್ಟವನ್ನು ಹತ್ತುತ್ತಿರುವಾಗ , ಕಲ್ಲು ಮಂಟಪದಲ್ಲಿ ಕುಳಿತು ಪುಲಾವ್ ಸೇವಿಸಿದ ಮಾನವರು ನಾವು. ನಾನು ಒಂದು ನಿರ್ಧಾರವನ್ನು ಕೈಗೊಳ್ಳಬೇಕಿತ್ತು. ತಲೆನೋವು ಅದಾಗಲೇ ಪ್ರಾರಂಭವಾಗಿತ್ತು. ನಿಲ್ಲದ ಬಾಯಾರಿಕೆ. ಯಾವ ಕ್ಷಣದಲ್ಲಿ ಬೇಕಾದರೂ ಕುಸಿಯಬಹುದಾದ ಕಾಲುಗಳು. ಇಷ್ಟೆಲ್ಲಾ ನಡೆಯುತ್ತಿರಬೇಕಾದರೆ , ಇನ್ನೂ ಶೇಷಪರ್ವತ ಬಂದಿಲ್ಲ. ಕುಮಾರಪರ್ವತ ತನಕ ಹೋಗಬೇಕೆ ಅಥವಾ ಶೇಷಪರ್ವತ ತನಕ ಹೋಗಿ ಹಿಂದಿರುಗಬೇಕೆ ಎಂದು ನಿರ್ಧರಿಸಬೇಕು. ನನ್ನ ರೂಮ್ ಮೇಟ್ ಹಾಗು ಟ್ರೆಕ್ ಲೀಡ್ ಖಂಡಿತವಾಗಿಯೂ ಕೊನೆಯ ತನಕ ತೆರಳಲಿದ್ದಾರೆ ಎಂಬುದು ತಿಳಿದಿತ್ತು. ಈ ಗೊಂದಲದ ನಡುವೆಯೇ ಮತ್ತೆ ಪಯಣ ಪ್ರಾರಂಭಿಸಿದ ಕೆಲವೇ ಕ್ಷಣಗಳಲ್ಲಿ , ಹಲವು ತಿಂಗಳ ಹಿಂದೆ ಕಾಡಿದ್ದ ಹಲ್ಲು ನೋವು , ತುಂಬಾ ಒಳ್ಳೆಯ ಸಮಯ ನೋಡಿ ಮತ್ತೆ ಭೇಟಿಯಾಗಲು ಬಂದು ಬಿಟ್ಟಿತು. ಅವರಿಬ್ಬರು ನಿಲ್ಲದೆ ಮುಂದೆ ಸಾಗುತ್ತಿದ್ದರು. ಕುಳಿತುಕೊಂಡು ಬಿಡಲೇ ಎಂದು ಒಮ್ಮೆ ಯೋಚಿಸಿದೆ. ಹಿಂದಿರುಗಿ ನೋಡಿದೆ. ಅದೆಷ್ಟೋ ಬೆಟ್ಟಗಳು ನನ್ನ ಕೆಳಗಿದ್ದವು. ಹಸಿರು ಹೊದಿಕೆಯಲ್ಲಿ ಕಂಗೊಳಿಸುತ್ತಿರುವ ಬೆಟ್ಟಗಳು. ಇನ್ನೂ ಎತ್ತರಕ್ಕೆ ಹೋದರೆ ಅದೆಷ್ಟು ಅಂದವಾಗಿ ಕಾಣಬಹುದು ?! ಹೋಗಲೇ ಬೇಕು ಅಲ್ಲಿಗೆ ಎಂದು ಆಲೋಚಿಸಿ ನಡೆದೆ. ನಮ್ಮನ್ನು ಹೌಹಾರಿಸುವಂತಹ ದೃಶ್ಯ ಎದುರಾಯಿತು. ಆ ನೀರಿನ ಜಾಗದ ಬಳಿ ಕುಳಿತ್ತಿದ್ದ ಗೆಳೆಯ , ಇಲ್ಲಿ ನಾವು ಬರುತ್ತಿರುವುದನ್ನು ಎತ್ತರದಲ್ಲಿ ಕುಳಿತು ನೋಡುತ್ತಿದ್ದ !!!
ಆತ ಕಲ್ಲು ಮಂಟಪದಲ್ಲಿ ವಿಶ್ರಾಂತಿಯೇ ಪಡೆದಿರಲಿಲ್ಲ. ಗಟ್ಟಿಯಾಗಿ ಧೈರ್ಯ ಮಾಡಿ ನೇರವಾಗಿ ನಡೆಯುತ್ತಾ ಅಲ್ಲಿಯವರೆಗೆ ತಲುಪಿದ್ದ! ಆದರೆ ಆತನ ಸ್ಥಿತಿ ಇನ್ನೂ ಹಾಗೆಯೇ ಇತ್ತು. ಊಟ ಮಾಡಲು ಅಲ್ಲೇ ಕುಳಿತ. ಆತ ಕೊನೆಯವರೆಗೆ ಬರಲಾರ ಎಂಬುದು ಅಲ್ಲೇ ಖಾತ್ರಿಯಾಗಿತ್ತು. ಮತ್ತೇ ಹಸಿವು ಪ್ರಾರಂಭವಾಗಿತ್ತು. ನಮ್ಮ ಬಳಿ ಇದ್ದದ್ದು ಹಲವು ಚಾಕಲೇಟ್ ಗಳು ಮಾತ್ರ. ಅವುಗಳನ್ನು ತಿಂದರೆ ಬಾಯಾರಿಕೆ ಹೆಚ್ಚಾಗುತ್ತದೆ. ಬಾಟಲಿಯ ನೀರು ಇನ್ನೇನು ಮುಗಿಯಲಿದೆ. ಪ್ರಚಂಡವಾದ ಬಿಸಿಲು ಆವರಿಸಿರುವ ಬೆಟ್ಟದ ಮೇಲೆ ಮತ್ತೆ ನೀರು ಸಿಗುವ ಸಾಧ್ಯತೆಯೇ ಇಲ್ಲ. ಜೋರಾಗಿ ಗಾಳಿ ಬೀಸಿದರೂ ದೂರವಾಗದ ದಣಿವು. ಇಂತಹ ಸಂದರ್ಭದಲ್ಲಿ , ಒಬ್ಬರು ಬಂದು ಕಿತ್ತಳೆ ಹಣ್ಣು ನೀಡಿದರು. ಅವರು ಯಾರೆಂದು ನನಗೆ ಗೊತ್ತಿಲ್ಲ. ನನಗೆ ಪರಿಚಯವೇ ಇಲ್ಲದ , ಸಂಬಂಧವೇ ಇರದ ವ್ಯಕ್ತಿ. ಬಯಸಿದ್ದರೆ ಹಾಯಾಗಿ ತನ್ನ ಪಾಡಿಗೆ ತಿಂದುಕೊಂಡು ಅವರು ತೆರಳಬಹುದಿತ್ತು. ತುಂಬಾ ಎತ್ತರದ ಬೆಟ್ಟವೊಂದರ ಮೇಲೆ ಕಂಡ ಮಾನವೀಯತೆ ಅದು. ಇಡೀ ಮಾನವ ಸಂಬಂಧದ ಅಂದವನ್ನು ಬಿಚಿಟ್ಟಿತ್ತು ಈ ಕುಮಾರಪರ್ವತ ಟ್ರೆಕ್. ನೀವು ಬೆಟ್ಟ ಹತ್ತುವಾಗ ಜಾರಿದರೆ ಯಾರದ್ದೋ ಹೃದಯ ಮಿಡಿಯುತ್ತದೆ. ಯಾರೋ ಬಂದು ನೀರು ನೀಡುತ್ತಾರೆ. ಯಾರೋ ಹುರಿದುಂಬಿಸುತ್ತಾರೆ. ಯಾರೋ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ. ಯಾರೋ ಸ್ಪೂರ್ತಿಯಾಗುತ್ತಾರೆ. ಎಲ್ಲರೂ ಮಾನವರು ಎಂಬುದಷ್ಟೇ ಅಲ್ಲಿದ್ದ ಸೇತುವೆ.
ನಾನು ಈ ಟ್ರೆಕ್ ಪೂರ್ಣಗೊಳಿಸಲು ಆ ಒಂದು ಕಿತ್ತಳೆ ಹಣ್ಣು ಎಷ್ಟು ನೆರವಾಗಿತ್ತೋ , ಅಷ್ಟೇ ನೆರವು ಇನ್ನೊಂದು ಕಡೆಯಿಂದ ಬಂದಿತ್ತು. ಅದುವೇ , ನನ್ನ ಶರ್ಟ್ ಒಳಗೆ ತೆರಳಿ ಹೊಟ್ಟೆ ಭಾಗದಲ್ಲಿ ಬಲವಾಗಿ ಕಚ್ಚಿ ನಂತರ ತಪ್ಪಿಸಿಕೊಂಡು ಹಾರಿಹೋದ ಅಪರಿಚಿತ ನೊಣ. ಆ ಕುದಿಯುವ ಬಿಸಿಲಿನಲ್ಲಿ , ಆ ಗಾಯ ಇನ್ನಷ್ಟು ಹೆಚ್ಚಾಗಿ ಉರಿಯುತ್ತಿತ್ತು. ಅದೇ ಕಾರಣಕ್ಕೆ , ಅಲ್ಲಿಂದ ಮುಂದೆ ವಿಶ್ರಾಂತಿಗೆಂದು ಕುಳಿತಾಗ ಕಂಡ ಜೇನುನೊಣಗಳು ನನ್ನನ್ನು ವಿಶ್ರಾಂತಿ ಮುಗಿಸಿ ತಕ್ಷಣ ಹೊರಡಲು ಹುರಿದುಂಬಿಸಿದ್ದವು. ಹಾಗೋ ಹೀಗೋ ವೇಗವಾಗಿ ಬೆಟ್ಟ ಹತ್ತಬೇಕಿತ್ತು. ಏಕೆಂದರೆ ಒಂದು ವೇಳೆ ಹಾವುಗಳು ಎದುರಾಗುವುದಾದರೆ , ಅದು ಶೇಷಪರ್ವತದ ಸುತ್ತಮುತ್ತಲ್ಲಲ್ಲೇ ಎಂಬುದು ತಿಳಿದಿತ್ತು. ಕೊನೆಗೂ ಶೇಷಪರ್ವತ ತಲುಪಿದ್ದೆವು. ಅಲ್ಲಿಯ ತನಕ ತೆರಳಿ ಹಿಂದೆ ಬರಲು ಮನಸಾಗಲಿಲ್ಲ. ಅದೆಷ್ಟೇ ಕಷ್ಟವಾದರೂ , ಕುಮಾರಪರ್ವತ ಹತ್ತಲೇ ಬೇಕು ಎಂದು ನಿರ್ಧರಿಸಿ ಬಿಟ್ಟೆ. ಅಲ್ಲಿಗೆ ತಲುಪಲು , ಮೊದಲು ದಟ್ಟವಾದ ಒಂದು ಕಾಡು. ಮಳೆಗಾಲದಲ್ಲಿ ಲೀಚ್ ಗಳ ಸಾಮ್ರಾಜ್ಯವೇ ಇರುವ ಕಾಡು ಅದು. ಅದನ್ನು ದಾಟಿದ ನಂತರ ಎದುರಾದ್ದದ್ದು ಸುಮಾರು 60° ಯಲ್ಲಿದ್ದ ದೊಡ್ಡ ಬಂಡೆ. ಹತ್ತುವಾಗ ಒಂಚೂರು ಯಡವಿದರೂ ಸಾಕು. ಅರಿಯುವ ಮುನ್ನವೇ ಮತ್ತೇ ಕಾಡು ತಲುಪಿರುತ್ತೀರಿ. ಅದನ್ನು ಹತ್ತಿ ಮುನ್ನಡೆದ ಕೆಲವು ಕ್ಷಣಗಳ ನಂತರ ಕಂಡಿತು , ಕುಮಾರಪರ್ವತದ ಮೇಲೆ ರಾರಾಜಿಸುತ್ತಿದ್ದ ಕರ್ನಾಟಕದ ಧ್ವಜ !!
ಕೊನೆಗೂ ತಲುಪಿದ್ದೆವು !! ಎಲ್ಲಾ ದಣಿವು , ನೋವು ಮಾಯವಾಗಿತ್ತು. ಏನ್ನನ್ನೋ ಸಾಧಿಸಿದ ಹೆಮ್ಮೆ . ಅಲ್ಲಿಯವರೆಗೆ ತಲುಪಿದ್ದಕ್ಕೆ ಉಡುಗೊರೆಯಾಗಿ , ಮನತಣಿಸುವಂತಹ ಪ್ರಕೃತಿಯ ನೋಟ. ಸರಿಸುಮಾರು 36 ಜನರಿದ್ದ ನಮ್ಮ ಗುಂಪಿನಲ್ಲಿ ಕೊನೆಯವರೆಗೆ ತಲುಪಿದ್ದು ಮೂವರೇ ಎಂದು ಟ್ರೆಕ್ ಲೀಡ್ ನ ಬಳಿ ಚರ್ಚಿಸುತ್ತಿದ್ದೆ. ಅವರೂ ನಿರಾಶೆಯಿಂದ ತಲೆಯಾಡಿಸುತ್ತಿದ್ದರು. ಇನ್ನೇನು ಎದ್ದು ಹೊರಡಬೇಕು ಎಂದನಿಸುವಷ್ಟರಲ್ಲಿ , ಯಾರೋ ದೂರದಲ್ಲಿ ಕೈ ಬೀಸುತ್ತಾ ಬರುತ್ತಿದ್ದರು. ಪರಿಚಿತವಾದ ಮುಖವೇ. ಅಲ್ಲೆಲ್ಲೋ ಕೆಳಗೆ ನಾವು ಬಿಟ್ಟು ಬಂದಿದ್ದ ಕಾಲು ನೋವಿನ ಗೆಳೆಯ !!!!!! ಅದೆಷ್ಟು ಆನಂದವಾಯಿತು ಎಂದು ಬಣ್ಣಿಸಲು ಸಾಧ್ಯವಿಲ್ಲ!! ಒಬ್ಬಂಟಿಯಾಗಿ ಅಲ್ಲಿಂದ ಕೊನೆಯವರೆಗೆ ಬಂದ ವೀರನಾತ. ಎಷ್ಟು ಮೆಚ್ಚಿದರೂ ಕಮ್ಮಿಯೇ. ಇಡೀ ಟ್ರೆಕ್ ಗೆ ಆತನ ಸಾಹಸ ಪರಿಪೂರ್ಣತೆಯನ್ನು ನೀಡಿತ್ತು. ಸಮಯ ಮೀರುವ ಮೊದಲು ತಲುಪಬೇಕು ಎಂದು ಕೂಡಲೇ ಹೊರಟೆವು. ಸ್ವಲ್ಪ ಹೊತ್ತಿನಲ್ಲೇ ನಮ್ಮ ಗುಂಪಿನ ಇನ್ನಿಬ್ಬರೂ ಎದುರಾದರು. ಒಟಿನಲ್ಲಿ , 6 ಮಂದಿ ಕೊನೆಯವರೆಗೆ ತಲುಪಿದ್ದೆವು. ಹತ್ತುವಾಗ ಅದೆಷ್ಟು ಸವಾಲುಗಳು ಇದ್ದವೋ , ಅದಕ್ಕಿಂತ ಭೀಕರವಾದ ಸವಾಲು ಇಳಿಯುವಾಗ ಇರುತ್ತದೆಯೆಂದು ನಾನು ಊಹಿಸಿರಲಿಲ್ಲ. ಒಂದೇ ಒಂದು ತಪ್ಪು ಹೆಜ್ಜೆಯಿಟ್ಟರೂ ಸಾಕು. ಧರಧರನೆ ಉರುಳಿ ಗುರುತೂ ಸಿಗದ ಸ್ಥಿತಿ ತಲುಪಿಬಿಡುತ್ತೇವೆ. ಪ್ರತಿ ಹೆಜ್ಜೆ ಇರಿಸಿದಾಗಲೂ ಮಂಡಿ ನೋವಾಗುತ್ತಿತ್ತು. ಅಂದು ಸಂಜೆ ಚೆಕ್ ಪೋಸ್ಟ್ ತಲುಪಿ , ಭಟ್ರು ಮನೆಯಲ್ಲಿ ಊಟ ಮಾಡಿ , ಟೆಂಟ್ ನಲ್ಲಿ ಮಲಗಿ , ಮರುದಿನ ಮುಂಜಾನೆ ಬೇಗನೆ ಎದ್ದು , ಕೆಳಗಿಳಿಯುವಾಗ ಒಂದು ಲೀಚ್ ಎದುರಾಗಿದ್ದು ಬಹಳ ಆನಂದ ನೀಡಿತ್ತು. ಇನ್ನೇನು ಟ್ರೆಕ್ ಮುಗಿಯಲಿಕ್ಕಿತ್ತು. ಅಡ್ಡ ಬಿದ್ದಿದ್ದ ಮರವೊಂದರ ಮೇಲೆ ಕೈಯಿರಿಸಿ ಜಾರುವುದರಿಂದ ತಪ್ಪಿಸಿಕೊಂಡು ನಿಟ್ಟುಸಿರು ಬಿಟ್ಟೆ. ಆಗ ಒಂದು ವಿಚಾರ ಕಾಡತೊಡಗಿತು. ಈಗಲೂ ಕಾಡುತ್ತಿದೆ. ಯಾವ ಕಾಡು ಹಾಗು ಮರಗಳನ್ನು ನಾಶಪಡಿಸಿ ಇಂದು ನಾವು ಮೆರೆದಾಡುತ್ತಿದ್ದೇವೋ , ಅವುಗಳದ್ದೇ ಸಂಬಂಧಿಕರ ರೆಂಬೆ ಕೊಂಬೆಗಳಿಗೆ ತಮ್ಮ ಜೀವದ ಹೊಣೆಗಾರಿಕೆಯನ್ನು ವಹಿಸಿ , ಅನೇಕರು ಸಾಧಿಸುವ ಸಾಹಸವೇ ಟ್ರೆಕ್ ತಾನೆ ?!