ಟ್ರೆಕ್ ಗೆ ತೆರಳುವಾಗ ಕೆಲವು ವಿಚಾರಗಳನ್ನು ನೆನಪಿಡಬೇಕು . ಅದೆಷ್ಟೇ ಕಷ್ಟವಾದರೂ , ಕೇವಲ ಮೂಗಿನಿಂದ ಉಸಿರಾಡಬೇಕು . ನೀವು ಏದುಸಿರು ಬಿಡುತ್ತಾ ಬಾಯಿಯಿಂದ ಉಸಿರಾಡಿದರೆ , ತುಂಬಾ ಬೇಗ ಸುಸ್ತಾಗುತ್ತದೆ . ಅತಿಯಾಗಿ ಬಾಯಾರಿಕೆ ಆದರೂ , ಸ್ವಲ್ಪವೇ ನೀರು ಕುಡಿಯಬೇಕು. ಅಗತ್ಯವಿಲ್ಲದ ಯಾವುದೇ ವಸ್ತುವನ್ನು ಅಪ್ಪಿತಪ್ಪಿಯೂ ಹೊತ್ತಕೊಂಡು ಹೋಗಬಾರದು. ನಾನು ಈ ಮೂರೂ ತಪ್ಪುಗಳನ್ನು ಮಾಡಿದ್ದೆ. ಪಯಣದುದ್ದಕ್ಕೂ ನನ್ನ ರೂಮ್ ಮೇಟ್ ನಾನು ಉಸಿರಾಟದ ಹಾಗು ನೀರಿನ ವಿಚಾರದಲ್ಲಿ ಮಾಡುತ್ತಿದ್ದ ತಪ್ಪನ್ನು ಮತ್ತೆ ಮತ್ತೆ ತಿದ್ದುತ್ತಿದ್ದ. ಆದರೆ , ಮೊದಲ ಟ್ರೆಕ್ ಗೇ ಕುಮಾರಪರ್ವತವನ್ನು ಆಯ್ದುಕೊಂಡದ್ದಕ್ಕೆ ಉಡುಗೊರೆಯಾಗಿ , ನನ್ನ ಮನಸ್ಸು ಯಾವುದನ್ನೂ ಕೇಳಲು ಒಪ್ಪುತ್ತಿರಲಿಲ್ಲ. ಲೆಕ್ಕಾಚಾರ ಈ ರೀತಿ ಇತ್ತು. ಸಮಯ ಮೀರುವ ಮೊದಲು ಚೆಕ್ ಪೋಸ್ಟ್ ತಲುಪಬೇಕು. ಅಲ್ಲಿ ಟೆಂಟ್ ಹಾಗು ಇನ್ನಿತರ ವಸ್ತುಗಳನ್ನೆಲ್ಲಾ ಇರಿಸಿ , ಅನುಮತಿ ಪಡೆದು , ಕಲ್ಲು ಮಂಟಪ ತಲುಪಬೇಕು . ಅಲ್ಲಿಂದ ಶೇಷಪರ್ವತ . ಅದಾದಮೇಲೂ ಏನಾದರು ಅಲ್ಪಸ್ವಲ್ಪ ಶಕ್ತಿ ಉಳಿದಿದ್ದರೆ ಕುಮಾರಪರ್ವತ ! ಒಟ್ಟಿನಲ್ಲಿ ನಾನು ಅಂದುಕೊಂಡಿದ್ದ ಹಾಗೆ ಕುಮಾರಪರ್ವತದ ಕೊನೆ ಕೇವಲ ಒಂದು ಬೆಟ್ಟ ಹತ್ತಿದರೆ ತಲುಪುವ ಜಾಗವಲ್ಲ . ಅದೆಷ್ಟೋ ಬೆಟ್ಟಗಳನ್ನು ಹತ್ತಿದ ನಂತರ ಕುಮಾರಪರ್ವತ ತಲುಪುತ್ತೇವೆ!
ನಮ್ಮ ಜೊತೆಗಿದ್ದ ಟ್ರೆಕ್ ಲೀಡ್ ಗೆ ಸುಸ್ತಾಗುವುದಿಲ್ಲವೇ ಎಂದು ಆಲೋಚಿಸುತ್ತಾ , ಹೆಜ್ಜೆಯಿಡುತ್ತಿದ್ದೆ . ಒಂದೇ ಸಮನೆ ಉತ್ಸಾಹದಿಂದ ನಮ್ಮನ್ನು ಕರೆದು ಆಕೆ ಹಾವು ಎಂದು ತೋರಿಸುವಷ್ಟರಲ್ಲಿ ಅದು ಮರೆಯಾಗಿತ್ತು. ಎಲ್ಲವನ್ನೂ ಮರೆತು ಒಮ್ಮೆ ತಲುಪಿದರೆ ಸಾಕು ಎಂದು ಆಲೋಚಿಸುತ್ತಿದ್ದ ನನ್ನನ್ನು , ಪರಿಸರವನ್ನೂ ಗಮನಿಸಿ ಆನಂದಿಸುವಂತೆ ಆ ಘಟನೆ ಎಚ್ಚರಿಸಿತ್ತು. ಇಡೀ ಪಯಣದಲ್ಲಿ ಆಕೆ ಸುಸ್ತಾದಂತೆ ಕಂಡದ್ದು ನನಗೆ ನೆನಪಿಲ್ಲ. ಮೆಚ್ಚಬೇಕಾದ ವಿಚಾರವೆಂದರೆ , ತನ್ನ ಬಗ್ಗೆ ಹೆಚ್ಚು ಆಲೋಚಿಸದೆ , ಇಡೀ ತಂಡದ ಬಗ್ಗೆ ಕಾಳಜಿ ವಹಿಸಿ , ಎಲ್ಲರನ್ನೂ ಹುರಿದುಂಬಿಸಿ , ಆಕೆ ಮುನ್ನಡೆಸಿದ ರೀತಿ . ನಮ್ಮ ತಂಡ ಮೂರು ಗುಂಪುಗಳಾಗಿ ದೂರವಾಗಿತ್ತು. ಎದುರಿನಲ್ಲಿ ನಾನು , ರೂಮ್ ಮೇಟ್ , ಟ್ರೆಕ್ ಲೀಡ್ , ಈ ಹಿಂದೆ ತಿಳಿಸಿದ ಹೊಸ ಗೆಳೆಯ ಹಾಗು ಇನ್ನಿಬ್ಬರು. ಒಂದಿಷ್ಟು ಮಂದಿ ಇನ್ನೊಂದು ಟ್ರೆಕ್ ಲೀಡ್ ನ ಜೊತೆ ನಮ್ಮ ಹಿಂದೆ ತುಸು ದೂರದಲ್ಲಿ ಬರುತ್ತಿದ್ದರು. ಉಳಿದವರು ಮತ್ತೋರ್ವ ಪರಿಣಿತನ ಜೊತೆ , ಅವರಿಗಿಂತಲೂ ಹಿಂದೆ. ಒಟ್ಟಿನಲ್ಲಿ ಕೊನೆಯ ತನಕ ತಲುಪಬೇಕಾದರೆ ವೇಗವಾಗಿ ಸಾಗಬೇಕಾಗಿತ್ತು. ಏಕೆಂದರೆ ಸಂಜೆಯಾಗುವುದರೊಳಗೆ ಚೆಕ್ ಪೋಸ್ಟ್ ಗೆ ಹಿಂದಿರುಗಲೇಬೇಕು.
ಇರುವ ಶಕ್ತಿಯನ್ನೆಲ್ಲಾ ಬಳಸಿ ಹೇಗಾದರೂ ಮಾಡಿ ಚೆಕ್ ಪೋಸ್ಟ್ ತಲುಪಿಬಿಡಬೇಕು ಎಂದು ನಿರ್ಧರಿಸಿದ್ದೆ. ಆದರೆ ಅದೆಷ್ಟು ನಡೆದರೂ ಅದನ್ನು ತಲುಪುವ ಲಕ್ಷಣ ಕಾಣುತ್ತಿರಲಿಲ್ಲ. ಹಿಂದಿನ ದಿನ ಬೆಟ್ಟ ಹತ್ತಿದ್ದ ಕೆಲವರು ನಮ್ಮ ವಿರುದ್ಧ ದಿಕ್ಕಿನಲ್ಲಿ ನಡೆದುಕೊಂಡು ಬರುತ್ತಿದ್ದರು. ಅದೇನೋ ಒಂದು ರೀತಿಯ ಗೌರವ ಮೂಡಿತ್ತು ಅವರ ಮೇಲೆ. ನನ್ನ ರೂಮ್ ಮೇಟ್ ಆಗ ಮೊದಲ ಬಾರಿಗೆ ಒಳ್ಳೆಯ ವಿಚಾರ ತಿಳಿಸಿದ. ಚೆಕ್ ಪೋಸ್ಟ್ ಹತ್ತಿರವಾಗುತ್ತಿದೆ ಎಂದು. ಅದೆಷ್ಟು ಕೇಳಿದರೂ ಬಾಯಿಬಿಡದ ಟ್ರೆಕ್ ಲೀಡ್ ಕೂಡ ಈ ವಿಚಾರಕ್ಕೆ ಸಮ್ಮತಿಸೂಚಿಸುವ ರೀತಿಯಲ್ಲಿ ಹೆಜ್ಜೆಹಾಕುತ್ತಿದ್ದರು. ಕೊನೆಗೂ ಚೆಕ್ ಪೋಸ್ಟ್ ತಲುಪಿದೆವು . ನಳ್ಳಿಯಲ್ಲಿ ಬಂದ ನೀರನ್ನು ಮುಖದ ಮೇಲೆ ಎರಚಿದಾಗ , ವಿಲವಿಲ ಒದ್ದಾಡುತ್ತಿದ್ದ ಮೀನನ್ನು , ಸಮುದ್ರಕ್ಕೆ ಸೇರಿಸಿದಾಗ ಅದು ಮರುಜೀವ ಪಡೆವ ರೀತಿಯಂತಾಗಿತ್ತು ನಮಗೆ. ಟೆಂಟ್ ಒಂದನ್ನು ಸ್ಥಾಪಿಸಿ , ನಮ್ಮ ವಸ್ತುಗಳನ್ನೆಲ್ಲಾ ಅದರಲ್ಲಿರಿಸಿ , ಅನುಮತಿಯನ್ನೆಲ್ಲಾ ಪಡೆದು ಪಯಣ ಮುಂದುವರೆಸಿದೆವು. ಈಗ ಹೊರಲು ಭಾರವೇನೂ ಇರಲಿಲ್ಲ. ಆದರೆ ಇಲ್ಲಿಯವರೆಗೆ ಆಸರೆಯಾಗಿದ್ದ ಮರಗಳ ನೆರಳು ಮಾಯವಾಗಿತ್ತು. ಅತ್ಯಂತ ಉಗ್ರರೂಪದಲ್ಲಿ ಅಂದು ಕುದಿಯುತ್ತಿದ್ದ ಸೂರ್ಯನ ಕಿರಣಗಳು ನೇರವಾಗಿ ಮುಖಕ್ಕೆ ಹೊಡೆಯುತ್ತಿತ್ತು. ಇನ್ನೂ ಅದೆಷ್ಟೋ ಬೆಟ್ಟಗಳನ್ನು ಹತ್ತಬೇಕು. ಕಣ್ಣಿಗೆ ಕಾಣುತ್ತಿದ್ದ ಅತೀ ಎತ್ತರದ ಪ್ರದೇಶವನ್ನು ತೋರಿಸಿ , ” ಅದೇ ತಾನೆ ಕಲ್ಲು ಮಂಟಪ ? ” ಎಂದು ಕೇಳಿದೆ. ತಕ್ಷಣ ಒಂದು ಉತ್ತರ ಬಂತು. ” ಇಲ್ಲಿಂದ ಕಲ್ಲು ಮಂಟಪ ಕಾಣುತ್ತಲೇ ಇಲ್ಲ. ಅದಿನ್ನೂ ಬಹಳ ದೂರವಿದೆ” ಎಂದು. ಮುಂದೆ ನಡೆಯಲಾಗದೆ ಒಂದು ಬಂಡೆಯ ಮೇಲೆ ಕುಳಿತೆ . ಕಲ್ಲುಮಂಟಪವೇ ಅಷ್ಟು ದೂರವಿದೆ. ಅದಾದ ಮೇಲೆ ಶೇಷಪರ್ವತ . ಅದಾದಮೇಲೆ ಕುಮಾರಪರ್ವತ. ಅಸಾಧ್ಯವೆಂದನಿಸಿತು. ಈ ಸಂಧರ್ಭದಲ್ಲಿ ನೆರವಾದದ್ದು ನನ್ನ ಹೊಸ ಗೆಳೆಯನ ನೂರು ಹೆಜ್ಜೆಗಳ ತಂತ್ರ. ನೂರು ಹೆಜ್ಜೆಗಳ ನಂತರ ಒಂದು ಪುಟ್ಟ ವಿರಾಮ. ನಂತರ ಮತ್ತೆ ನೂರು ಹೆಜ್ಜೆಗಳು . ಹೇಗೋ ಹೆಜ್ಜೆಗಳನ್ನು ಇರಿಸುತ್ತಾ ಮುಂದೆ ಸಾಗುತ್ತಿದ್ದೆ. ನೀರು ಕುಡಿದ ಮರುಕ್ಷಣವೇ ಬಾಯಾರಿಕೆಯಾಗುತ್ತಿತ್ತು. ದೇಹದಲ್ಲಿ ಉಸಿರೇ ಇಲ್ಲವೇನೋ ಎನ್ನುವ ರೀತಿಯಲ್ಲಿ ಉಸಿರಾಡುತ್ತಿದ್ದೆ. ಮೆಲ್ಲಗೆ ಕಾಲು ನೋವೂ ಪ್ರಾರಂಭವಾಗಿತ್ತು. ಆರು ಜನರಿದ್ದ ನಾವು ಈಗ ನಾಲ್ಕು ಮಂದಿ ಮಾತ್ರ ಇದ್ದೆವು. ಇನ್ನಿಬ್ಬರು ಒಂದೆಡೆ ವಿಶ್ರಾಂತಿ ಪಡೆಯುತ್ತೇವೆಂದು ಕುಳಿತುಬಿಟ್ಟಿದ್ದರು. ನಾನು , ರೂಮ್ ಮೇಟ್ , ಹೊಸ ಗೆಳೆಯ ಹಾಗು ಟ್ರೆಕ್ ಲೀಡ್ . ಮುಂದೇನಾಗುವುದೋ ಎಂದು ಆಲೋಚಿಸುತ್ತಾ ನಡೆಯುತ್ತಿರಬೇಕಾದರೆ , ಸ್ವರ್ಗವೇ ಕಂಡಂತಾಯಿತು. ಕುದಿಯುತಿದ್ದ ಬೆಟ್ಟದ ಒಂದು ಬದಿಯಲ್ಲಿ ಮರಗಳ ನಡುವೆ ತಂಪಾದ ಬಂಡೆಗಳ ಮೇಲೆ , ಹಿಂದೆಂದೂ ಕುಡಿಯದಷ್ಟು ಶುಧ್ಧವಾದ ಅಮೃತದಂತಹ ನೀರು ಹರಿಯುತ್ತಿತ್ತು. ಮುಖದ ಮೇಲೆ ಎರಚಿದಷ್ಟೂ ಆನಂದ . ಇನ್ನೇನು ಚೇತರಿಸಿಕೊಂಡೆವು ಎನ್ನುವಾಗ , ಎದೆ ಬಡಿತ ಮತ್ತೇ ಹೆಚ್ಚಾಯಿತು. ನಮ್ಮೊಂದಿಗೆ ಇದ್ದ ಹೊಸ ಗೆಳೆಯ ಕಣ್ಮರೆಯಾಗಿದ್ದ.